ಬೆಂಗಳೂರು :  ‘ಫನಿ’ ಚಂಡಮಾರುತದಿಂದ ರಾಜ್ಯಕ್ಕೆ ಯಾವುದೇ ತೊಂದರೆ ಇಲ್ಲ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏ.28ರಿಂದ ಒಂದೆರೆಡು ದಿನ ಸ್ವಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಹಿಂದೂ ಮಹಾಸಾಗರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಪಕ್ಕದಲ್ಲಿರುವ ಕಡಿಮೆ ಒತ್ತಡ ಪ್ರದೇಶದಲ್ಲಿ ಫನಿ ಚಂಡಮಾರುತ ಶಕ್ತಿ ಗಳಿಸಿದೆ. ಈ ಚಂಡಮಾರುತ ಮತ್ತಷ್ಟು ಪ್ರಬಲವಾಗಿ  ಪಶ್ಚಿಮ ಮತ್ತು ವಾಯವ್ಯಭಾಗಕ್ಕೆ ಸಂಚರಿಸಲಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಆದರೆ, ಚಂಡಮಾರುತದ ನೇರ ಪ್ರಭಾವ ರಾಜ್ಯದ ಮೇಲಿಲ್ಲ. ರಾಜ್ಯದ ಕರಾವಳಿಯಲ್ಲಿ ಸ್ವಲ್ಪ ಗಾಳಿ ವೇಗ ಹಾಗೂ ಸಮುದ್ರದ ಅಲೆಗಳ ಏರಿಳಿತ ಹೆಚ್ಚಾಗಲಿದೆ. ಏ.28 ರಿಂದ ಒಂದೆರಡು  ದಿನ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಇನ್ನು ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲ ಭಾಗದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್ ಎನ್‌ಡಿಎಂಸಿ ವಿಜ್ಞಾನಿ ಸುನೀಲ್ ಗವಾಸ್ಕರ್ ಮಾಹಿತಿ ನೀಡಿದ್ದಾರೆ. 

ವಾಡಿಕೆಗಿಂತ ಉಷ್ಣಾಂಶ ಹೆಚ್ಚಳ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಹಾಗೂ ಗಾಳಿಯ ಒತ್ತಡ ಕಡಿಮೆ ಆಗಿರುವುದರಿಂದ ರಾಜ್ಯದ ಉತ್ತರ ಒಳನಾಡಿನಲ್ಲಿ ಶುಭ್ರ ಆಕಾಶ ಇರಲಿದ್ದು, ಮೋಡಗಳು ರೂಪಗೊಳ್ಳುವುದಿಲ್ಲ. ಇದರಿಂದ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮೇ 1 ವರೆಗೆ ವಾಡಿಕೆ ಪ್ರಮಾಣಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿರಲಿದೆ ಎಂದು ವಿವರಿಸಿದ್ದಾರೆ.