ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆ ಹಲವು ಅನಾಹುತಗಳನ್ನು ತಂದಿಟ್ಟಿದ್ದು ನಿಮಗೆಲ್ಲಾ ಗೊತ್ತಿರೋದೆ. ಮನೆಗಳಿಗೆ ನೀರು ನುಗ್ಗಿ ಭಾರೀ ಅವಾಂತರವಾಗಿತ್ತು. ಅದೇ ರೀತಿ ಕಾರುಗಳು ಕೂಡಾ ನೀರಿನಲ್ಲಿ ಮುಳುಗಿಹೋಗಿದ್ದವು. ಆ ಸಮಸ್ಯೆಯೀಗ ಕಾರು ಮಾಲೀಕರಿಗೆ ದೊಡ್ಡ ತಲೆನೋವಾಗಿದೆ. ಬೇಡಪ್ಪ ಬೇಡ ಈ ಕಾರುಗಳ ಸಹವಾಸ ಎನ್ನುವಂತಾಗಿಬಿಟ್ಟಿದೆ. ಏಕೆ ಅಂತೀರಾ ಈ ಸ್ಟೋರಿ ನೋಡಿ.

ಬೆಂಗಳೂರು(ಸೆ.21): ಉದ್ಯಾನನಗರಿಯಲ್ಲಿ ಸುರಿದ ಭಾರೀ ಮಳೆಗೆ, ಬೆಂಗಳೂರಿಗರು ಅಕ್ಷರಶಃ ಪರದಾಡುವಂತಾಗಿದೆ. ಅದ್ರಲ್ಲೂ ಕಾರು ಮಾಲೀಕರಂತು ದೇವ್ರೆ ಸಾಕಪ್ಪ ಈ ಕಾರಿನ ಸಹವಾಸ. ಕಾರಿನ ರಿಪೇರಿಗೆ ದುಡ್ಡು ಸುರಿಯಲು ನಮ್ಮಿಂದಾಗಲ್ಲ ಅನ್ನೋ ಸ್ಥಿತಿ ತಲುಪಿದ್ದಾರೆ. ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್, ಶಾಂತಿನಗರ ಸೇರಿದಂತೆ ಹಲವೆಡೆ ಸಾವಿರಾರು ಕಾರುಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಕೆಟ್ಟು ಗ್ಯಾರೇಜ್ ಸೇರಿರುವ ಕಾರುಗಳ ರಿಪೇರಿಗೆ ಮಾಲೀಕರು ಕಂಗಾಲಾಗಿದ್ದಾರೆ.

ಸಾಕಪ್ಪ ಕಾರಿನ ಸಹವಾಸ

ಕಾರುಗಳ ರಿಪೇರಿಗೆ ಸರ್ವೀಸ್‌ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ ಕೇಳಲಾಗುತ್ತಿದೆ. ಒಂದು ಕಾರಿನ ರಿಪೇರಿಗೆ 5 ರಿಂದ10 ದಿನಗಳು ಹಿಡಿಯುತ್ತಿದ್ದು. 40 ಸಾವಿರದಿಂದ 2 ಲಕ್ಷದವರೆಗೂ ಖರ್ಚಾಗುತ್ತಿದೆ. ಕೇಳಿದ ಟೈಂಗೆ ಕಾರು ಬೇಕಂದ್ರೆ ಅವ್ರು ಕೇಳಿದಷ್ಟು ಹಣ ನೀಡಲೇಬೇಕು. ಈವರೆಗೆ ಟೊಯೋಟಾ, ಮಾರುತಿ, ಹೊಂಡೈ ಸೇರಿದಂತೆ ಇನ್ನಿತ್ತರ ಕಂಪೆನಿಯ ಸುಮಾರು 260 ಕಾರುಗಳು ಮಳೆಯಿಂದಾಗಿ ಹಾನಿಗೀಡಾಗಿವೆ. ಇದರಲ್ಲಿ ಸುಮಾರು 180 ಕಾರುಗಳನ್ನು ರಿಪೇರಿ ಮಾಡಲಾಗಿದ್ದು, 120 ವಾಹನಗಳ ರಿಪೇರಿ ಇನ್ನೂ ಬಾಕಿ ಇದೆ.

ಮಳೆಯಿಂದ ಜಲಾವೃತಗೊಂಡ ಕಾರನ್ನ ಅನೇಕರು ಚಾಲನೆ ಮಾಡಿ, ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾರಿನ ಎಂಜಿನ್‌ ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಕಾರುಗಳು ಕೆಟ್ಟು ಹೋಗುತ್ತಿವೆ. ಈ ರೀತಿ ಕಾರನ್ನು ಚಾಲನೆ ಮಾಡಿರುವುದರಿಂದ ಅಂತಹ ವಾಹನಗಳಿಗೆ ವಿಮೆ ಕೂಡಾ ಸಿಗೋದಿಲ್ಲ. ಇದ್ರಿಂದ ಕಾರು ರಿಪೇರಿಗೆ ಹಣ ಹೊಂದಿಸಲು ಮಾಲೀಕರು ಪರದಾಡುತ್ತಿದ್ದಾರೆ