ಕಳೆದ ಒಂದೂವರೆ ತಿಂಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ವರುಣ ಕೊನೆಗೂ ಕೃಪೆ ತೋರಿದ್ದಾನೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ 2-3 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಕೆಲವೆಡೆ ಅದೇ ಮಳೆ ಸಣ್ಣ ಅವಾಂತರವನ್ನು ಸೃಷ್ಟಿಸಿದೆ.

ಬೆಂಗಳೂರು(ಜುಲೈ 21): ಮಳೆ ಇಲ್ಲದೇ ಬಣ ಬಣ ಅಂತಿದ್ದ ಹೊಲ ಗದ್ದೆಗಳಲ್ಲಿ ಜೀವ ಕಳೆ ತುಂಬಲಾರಂಭಿಸಿದೆ. ಬರದಿಂದ ಕಂಗೆಟ್ಟಿದ್ದ ಜನತೆ ಹರ್ಷಭರಿತರಾಗಿದ್ದಾರೆ. ಆದ್ರೆ ಕೆಲವೆಡೆ ವರುಣನ ಆರ್ಭಟದಿಂದ ಜನತೆ ಕಂಗಾಲಾಗಿದ್ದಾರೆ. ಕರಾವಳಿ, ಮಲೆನಾಡು, ಹಳೆ ಮೈಸೂರು, ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಸೇರಿದಂತೆ ಎಲ್ಲೆಡೆ ಧಾರಾಕಾರ ಮಳೆಯಾಗಿದೆ.

ಮುಂಗಾರು ಆರಂಭವಾದ ನಂತರ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆಯಾಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೊಂದೆಡೆ ವಿರಾಜಪೇಟೆಯಲ್ಲಿ ಸೇತುವೆಯೊಂದು ಕುಸಿದುಬಿದ್ದಿದೆ. ಸೇತುವೆ ಕುಸಿತದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬುತ್ತಿವೆ.

ಇನ್ನು ಭಾರೀ ಮಳೆಗೆ ಚಿಕ್ಕೋಡಿ ತಾಲೂಕಿನ ಕೆಳಮಟ್ಟದ ಸೇತುವೆಗಳು ಜಲಾವೃತಗೊಂಡಿವೆ. ಮಳೆಯಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, 90 ಸಾವಿರ ಕ್ಯೂಸೆಕ್ಸ್ ನೀರನ್ನು ರಾಜಾಪೂರ ಡ್ಯಾಂನಿಂದ ಕೃಷ್ಣಾ ನದಿಗೆ ಬಿಡಲಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು ಕಲ್ಲೋಳ, ದೂದಗಂಗಾ, ಕಾರದಗಾ ಬೋಜ್, ಮಲ್ಲಿಕವಾಡ, ದತ್ತವಾಡ, ವೇದಗಂಗಾ ನದಿಯ ಅಕ್ಕೋಳ, ಸಿದ್ನಾಳ ಸೇತುವೆಗಳು ಮುಳುಗಡೆಯಾಗಿವೆ. ಮಳೆ ಹೀಗೆ ಮುಂದುವರೆದರೆ ಜತ್ರಾಟ, ಬಿವಶಿ ಬೋಜವಾಡಿ, ಹುನ್ನರಗಿ ಸೇತುವೆಗಳು ಕೂಡ ಮುಳುಗಡೆಯಾಗುವ ಸಾಧ್ಯತೆಯಿದೆ.

ಬಾಗಲಕೋಟೆ, ವಿಜಯಪುರ, ದಕ್ಷಿಣ ಕನ್ನಡ, ಗದಗ, ಕಲಬುರ್ಗಿ, ರಾಯಚೂರು, ಮಂಡ್ಯ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಸುಮಾರು 25 ಜಿಲ್ಲೆಗಳಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದೆ.

ಒಂದೆಡೆ ಭಾರೀ ಮಳೆಯು ಹಲವು ಕಡೆ ಸಂಕಷ್ಟವನ್ನು ತಂದರೂ ಒಟ್ಟಾರೆಯಾಗಿ ರೈತರು ಸಂತಸ ಪಟ್ಟಿದ್ದಾರೆ. ಮಳೆಯಿಂದ ಒಂದೇ ವಾರದಲ್ಲಿ ಬಿತ್ತನೆ ಪ್ರಮಾಣ ಕೂಡ ಹೆಚ್ಚಾಗಿದೆ.