ನವದೆಹಲಿ[ಸೆ.12]: ರೈಲು ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡಿದ ಬಳಿಕ ಅವುಗಳನ್ನು ಪುಡಿ ಮಾಡುವ ಯಂತ್ರದಲ್ಲಿ ಹಾಕಿರಿ, ನಿಮ್ಮ ಮೊಬೈಲ್‌ ವ್ಯಾಲೆಟ್‌ನಲ್ಲಿ ಹಣ ಪಡೆಯಿರಿ..!.

ಹೌದು, ರೈಲ್ವೆ ಇಲಾಖೆಯು ಏಕ ಬಳಕೆ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ‘ಬಾಟಲ್‌ ಕ್ರಷರ್‌ ಯಂತ್ರ’ಗಳನ್ನು ಇರಿಸಿದ್ದು, ಜನರು ತಾವು ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಮಾಡಿದ ನಂತರ ಅವುಗಳನ್ನು ಈ ಯಂತ್ರದಲ್ಲಿ ಹಾಕಿದರೆ ಖಾತೆಗೆ ಹಣ ಹಾಕುವ ಯೋಜನೆ ರೂಪಿಸಿದೆ.

ಸ್ಟೀಲ್ ಬಾಟಲ್, ಬಟ್ಟೆ ಚೀಲವನ್ನೇ ಬಳಸಿ: ಪ್ರವಾಸಿಗರಿಗೆ 'ಕ್ಲೀನ್ ಮೈಸೂರು' ಮನವಿ

ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್‌, ವಿವಿಧ ರೈಲು ನಿಲ್ದಾಣಗಳಲ್ಲಿ 400 ಬಾಟಲ್‌ ಕ್ರಷರ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಅದರಲ್ಲಿ ತಾವು ಬಳಸಿದ ಪ್ಲಾಸ್ಟಿಕ್‌ ವಸ್ತುಗಳನ್ನು ಹಾಕಿ, ಮೊಬೈಲ್‌ ಸಂಖ್ಯೆಯನ್ನು ನಮೂದಿಸಿದಲ್ಲಿ ವ್ಯಾಲೆಟ್‌ಗೆ ಹಣ ಸಂದಾಯವಾಗಲಿದೆ. ಪ್ರಸ್ತುತ 128 ರೈಲು ನಿಲ್ದಾಣಗಳಲ್ಲಿ 160 ಬಾಟಲ್‌ ಕ್ರಷರ್‌ ಯಂತ್ರ ಲಭ್ಯವಿವೆ. ನಿಲ್ದಾಣಗಳಲ್ಲಿ ಬಳಸಿ ಬಿಸಾಡಲಾದ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಗ್ರಹಿಸಿ ಮರುಬಳಕೆಗೆ ಕಳುಹಿಸಲು ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ