2 ಕಿ.ಮೀ. ಉದ್ದದ ಗೂಡ್ಸ್‌ ರೈಲು ಸಂಚಾರ ಯಶಸ್ವಿ!| ಛತ್ತೀಸ್‌ಗಢದ ಭಿಲಾಯಿಯಿಂದ ಕೋರ್ಬಾ ನಿಲ್ದಾಣದ ವರೆಗೆ ಸಂಚಾರ| ಅನಕೊಂಡಾ ಆನ್‌ ವ್ಹೀಲ್ಸ್‌/ ಭಾರತೀಯ ರೈಲ್ವೆಯಿಂದ ಇತಿಹಾಸ ಸೃಷ್ಟಿ

ನವದೆಹಲಿ[ಮೇ.31]: 2 ಕಿ.ಮೀ. ಉದ್ದದ ಸರಕು ಸಾಗಣೆ ರೈಲನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆ ಹೊಸ ಇತಿಹಾಸ ನಿರ್ಮಿಸಿದೆ. ಬಿಲಾಸ್ಪುರದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಆಗ್ನೇಯ ಹಾಗೂ ಮಧ್ಯ ವಲಯ ರೈಲ್ವೆ ವಿಭಾಗ ಸೋಮವಾರ ಛತ್ತೀಸ್‌ಗಢದ ಭಿಲಾಯ್‌ನಿಂದ ಕೊರ್ಬಾ ರೈಲು ನಿಲ್ದಾಣದ ವರೆಗೆ 2 ಕಿ.ಮೀ. ಉದ್ದದ ಸರಕು ಸಾಗಣೆ ರೈಲನ್ನು ಯಶಸ್ವಿಯಾಗಿ ಓಡಿಸಿದೆ.

ಸಾಮಾನ್ಯವಾಗಿ ಸರಕು ಸಾಗಣೆ ರೈಲು 700 ಮೀಟರ್‌ ಉದ್ದವಿರುತ್ತದೆ. ಆದರೆ, ‘ಅನಕೊಂಡಾ’ ಎಂದೇ ಕರೆಸಿಕೊಂಡಿರುವ ಈ ರೈಲು ಮೂರು ಮೂರು ಗೂಡ್ಸ್‌ ರೈಲುಗಳನ್ನು ಜೋಡಿಸಿ ಸಿದ್ಧಪಡಿಸಲಾಗಿದೆ. ಈ ರೈಲು 147 ಬೋಗಿಗಳನ್ನು ಹೊಂದಿದೆ.

ಡೀಸೆಲ್‌ ಎಂಜಿನ್‌, ಒಬ್ಬ ಲೋಕೋ ಪೈಲಟ್‌ (ರೈಲು ಚಾಲಕ) ಮತ್ತು ಸಹಾಯಕ ಲೋಕೋ ಪೈಲಟ್‌ನ ಸಹಾಯದಿಂದ ರೈಲನ್ನು ಯಶಸ್ವಿಯಾಗಿ ಓಡಿಸಲಾಗಿದೆ.

ಮೂರು ಗೂಡ್ಸ್‌ ರೈಲುಗಳನ್ನು ಒಂದಕ್ಕೊಂದು ಬೆಸೆಯುವ ತಂತ್ರಜ್ಞಾನವನ್ನು ಇಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಶಕ್ತಿ ನಿಯಂತ್ರಣಾ ವ್ಯವಸ್ಥೆಯ ಮೂಲಕ ಮುಂದಿನ ಎಂಜಿನ್‌ ಇಡೀ ರೈಲನ್ನು ಮುಂದಕ್ಕೆ ಎಳೆಯುತ್ತದೆ. ಈ ವಿಧಾನದಿಂದ ಡೀಸೆಲ್‌ ಹಾಗೂ ಸರಕು ಸಾಗಣೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.