ನವದೆಹಲಿ[ಆ.12]: ಪಾಕಿಸ್ತಾನ ಸಂಝೌತಾ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಸ್ಥಗಿತಗೊಳಿಸಿದ ಕೆಲ ದಿನದ ಬಳಿಕ ಭಾರತ ಕೂಡ ಸಂಝೌತಾ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಅಂತಾರಾಷ್ಟ್ರೀಯ ಗಡಿಗೆ ಕೊನೆಗೊಳಿಸಿದೆ ಎಂದು ಭಾರತೀಯ ರೈಲ್ವೆ ಘೋಷಿಸಿದೆ.

ಲಾಹೋರ್‌-ಅಟ್ಟಾರಿ ನಡುವೆ ಸಂಚರಿಸುತ್ತಿದ್ದ ಸಂಝೌತಾ ಎಕ್ಸ್‌ಪ್ರೆಸ್‌ 14607/14608 ರೈಲು ಸೇವೆಯನ್ನು ಪಾಕಿಸ್ತಾನ ರದ್ದು ಪಡಿಸಿದ್ದು, ಆ ರೈಲಿಗೆ ದೆಹಲಿಯಿಂದ ಅಟ್ಟಾರಿ ವರೆಗೆ ಸಂಪರ್ಕ ಕಲ್ಪಿಸುತ್ತಿದ್ದ ರೈಲು ಸಂಖ್ಯೆ 14001/14002 ಅನ್ನು ಭಾರತ ರದ್ದು ಮಾಡಿದೆ ಎಂದು ಉತ್ತರ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್‌ ಕುಮಾರ್‌ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್‌ 370ಯನ್ನು ಭಾರತ ರದ್ದು ಮಾಡಿದ ಹಿನ್ನೆಲೆ ಪಾಕ್‌ ಭಾರತದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಲು ತೀರ್ಮಾನಿಸಿದ್ದು, ಪಾಕಿಸ್ತಾನ ಸಂಜೋತಾ ಎಕ್ಸ್‌ಪ್ರೆಸ್‌ ಮತ್ತು ಥಾರ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ರದ್ದುಗೊಳಿಸಿತ್ತು.