"ರಾಹುಲ್ ಗಾಂಧಿ ಶೀಘ್ರದಲ್ಲೇ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರ ನೀಡಲು ಸದ್ಯಕ್ಕೆ ಸಾಧ್ಯವಿಲ್ಲ"

ನವದೆಹಲಿ(ಅ. 25): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷ ಹುದ್ದೆಗೆ ಏರುವುದು ಬಹುತೇಕ ನಿಶ್ಚಿತ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಅಂಬಿಕಾ ಸೋನಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಂಬಿಕಾ, "ರಾಹುಲ್ ಗಾಂಧಿ ಶೀಘ್ರದಲ್ಲೇ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರ ನೀಡಲು ಸದ್ಯಕ್ಕೆ ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.

ಅನೇಕ ಹಿರಿಯ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿಯವರ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದುತ್ತಿರುವ ಈ ಸಂದರ್ಭದಲ್ಲಿ ಅಂಬಿಕಾ ಸೋನಿ ನೀಡಿರುವ ಹೇಳಿಕೆಯು ಗಮನಾರ್ಹವಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿರುವುದು ಇದಕ್ಕೆ ಇಂಬುಕೊಡುವಂತಿದೆ.

ಇದೇ ರಾಹುಲ್ ವಿಷಯವಾಗಿ ಕಾಂಗ್ರೆಸ್'ನಿಂದ ಬಂಡಾಯವೆದ್ದು ಬಿಜೆಪಿ ಸೇರಿದ ರೀಟಾ ಬಹುಗುಣ ಜೋಶಿಯವರು ರಾಹುಲ್ ಗಾಂಧಿಗೆ ಹೋಲಿಸಿದರೆ ಸೋನಿಯಾ ಗಾಂಧಿ ನಾಯಕತ್ವ ಎಷ್ಟೋ ಮೇಲು ಎನ್ನುತ್ತಾರೆ. "ರಾಹುಲ್ ಗಾಂಧಿಯವರ ನಾಯಕತ್ವ ಈ ದೇಶದ ಜನರಿಗೆ ಬೇಕಾಗಿಲ್ಲ. ಪಕ್ಷದ ಕಾರ್ಯಕರ್ತರ ಧ್ವನಿ ಕೇಳಲು ರಾಹುಲ್'ಗೆ ಬರೋದಿಲ್ಲ. ಸೋನಿಯಾ ಗಾಂಧಿಯವರು ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ, ಆದರೆ ಕನಿಷ್ಠ ಪಕ್ಷ ನಿಮ್ಮ ಮಾತುಗಳನ್ನ ಆಲಿಸುತ್ತಾರೆ" ಎಂದು ರೀಟಾ ಬಹುಗುಣ ಜೋಷಿ ಅಭಿಪ್ರಾಯಪಟ್ಟಿದ್ದಾರೆ.