ನವದೆಹಲಿ[ಸೆ.29]: ಶೀಘ್ರದಲ್ಲೇ ನಡೆಯಲಿರುವ ಪಂಜಾಬ್‌ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ವಿವಿಧ ರಾಜ್ಯಗಳಲ್ಲಿನ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದಲೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹಿಂದೆ ಸರಿದಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹಿರಿಯ ನಾಯಕರು, ರಾಜ್ಯ ಘಟಕಗಳ ನಾಯಕರ ಜೊತೆ ಸಮಾಲೋಚನೆ ನಡೆಸಬೇಕು. ರಾಜ್ಯ ಘಟಕಗಳು ಸೂಚಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆಯನ್ನೂ ರಾಜ್ಯ ನಾಯಕರೇ ಹೊರಬೇಕು. ಹೀಗಾಗಿ ಈ ಪ್ರಕ್ರಿಯೆಯಿಂದ ತಾವು ಹಿಂದೆ ಸರಿಯುವುದು ಒಳಿತು. ಈ ವಿಷಯವನ್ನು ಪಕ್ಷದಲ್ಲಿನ ಹಿರಿಯ ನಾಯಕರೇ ನೋಡಿಕೊಳ್ಳಲಿದ್ದಾರೆ ಎಂಬುದು ರಾಹುಲ್‌ ಅಂಬೋಣ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಇದೇ ಕಾರಣದಿಂದಾಗಿಯೇ ಕಳೆದ ವಾರ ಅಭ್ಯರ್ಥಿಗಳ ಆಯ್ಕೆ ನಡೆಸಲು ನಡೆದ ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ಸಭೆಗೆ ರಾಹುಲ್‌ ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಆದರೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ರಾಹುಲ್‌ ಗೈರಾದರೂ, ಅವರು ಚುನಾವಣಾ ಪ್ರಚಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಮೇಲಾಗಿ ಹಿಂದಿನ ಚುನಾವಣೆಗಳಿಗಿಂತಲೂ ಹೆಚ್ಚಾಗಿ ವಿವಿಧ ರಾಜ್ಯಗಳಲ್ಲಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಹೊಣೆ ಹೊತ್ತು ಕೆಲ ತಿಂಗಳ ಹಿಂದೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಹಂಗಾಮಿಯಾಗಿ ಈ ಹುದ್ದೆಯನ್ನು ಸೋನಿಯಾ ಗಾಂಧಿಗೆ ವಹಿಸಲಾಗಿತ್ತು.