ಇಂದಿನಿಂದ ರಾಹುಲ್ ನಾಲ್ಕು ದಿನ ರಾಜ್ಯ ಪ್ರವಾಸ

First Published 10, Feb 2018, 7:41 AM IST
Rahul Gandhi Visit Karnataka Today
Highlights

ಕಾಂಗ್ರೆಸ್‌ ಪಾಲಿಗೆ ದೇಶದಲ್ಲೇ ಅತ್ಯುತ್ತಮ ಅಖಾಡ ಎಂದು ಪರಿಗಣಿಸಲಾಗಿರುವ ಕರ್ನಾಟಕದಲ್ಲಿ ಮತ್ತೆ ಅಧಿಕಾರ ನೀಡುವಂತೆ ರಾಜ್ಯದ ಜನರ ಆಶೀರ್ವಾದ ಕೋರಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರದಿಂದ ನಾಲ್ಕು ದಿನಗಳ ಕಾಲ ಹೈದರಾಬಾದ್‌ ಕರ್ನಾಟಕದಲ್ಲಿ ಪ್ರವಾಸ ನಡೆಸಲಿದ್ದು, ಹೊಸಪೇಟೆಯಲ್ಲಿ ನಡೆಯುವ ಬೃಹತ್‌ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು : ಕಾಂಗ್ರೆಸ್‌ ಪಾಲಿಗೆ ದೇಶದಲ್ಲೇ ಅತ್ಯುತ್ತಮ ಅಖಾಡ ಎಂದು ಪರಿಗಣಿಸಲಾಗಿರುವ ಕರ್ನಾಟಕದಲ್ಲಿ ಮತ್ತೆ ಅಧಿಕಾರ ನೀಡುವಂತೆ ರಾಜ್ಯದ ಜನರ ಆಶೀರ್ವಾದ ಕೋರಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರದಿಂದ ನಾಲ್ಕು ದಿನಗಳ ಕಾಲ ಹೈದರಾಬಾದ್‌ ಕರ್ನಾಟಕದಲ್ಲಿ ಪ್ರವಾಸ ನಡೆಸಲಿದ್ದು, ಹೊಸಪೇಟೆಯಲ್ಲಿ ನಡೆಯುವ ಬೃಹತ್‌ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚುನಾವಣೆ ಘೋಷಣೆಗೂ ಮುನ್ನ ರಾಜ್ಯದ ನಾಲ್ಕು ವಿಭಾಗಗಳಿಗೂ ಪ್ರತ್ಯೇಕವಾಗಿ ನಡೆಸುವ ಅವರ ಪ್ರಚಾರ ಪ್ರವಾಸಕ್ಕೆ ಜನಾಶೀರ್ವಾದ ಯಾತ್ರೆ ಎಂಬ ಹೆಸರು ನೀಡಿದ್ದು, ಮೊದಲ ಹಂತವಾಗಿ ಶನಿವಾರದಿಂದ ನಾಲ್ಕು ದಿನ ಹೈದರಾಬಾದ್‌ ಕರ್ನಾಟಕ ಯಾತ್ರೆಯನ್ನು ರಾಹುಲ್‌ ಕೈಗೊಂಡಿದ್ದಾರೆ. ಗುಜರಾತ್‌ ಚುನಾವಣೆಯಲ್ಲಿ ಬಳಸಿದ ತಮ್ಮ ನೆಚ್ಚಿನ ಬಸ್‌ ಮೂಲಕವೇ ರಾಜ್ಯದಲ್ಲೂ ಅವರು ಸಂಚರಿಸಲಿದ್ದು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟಿದ್ದನ್ನು ಬಿಂಬಿಸಲು 371ಜೆ ತಿದ್ದುಪಡಿಯ ಐದು ಫಲಾನುಭವಿಗಳು ಈ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ನಂತರ ರಾಹುಲ್‌ ಗಾಂಧಿ ಅವರು ರಾಜ್ಯಕ್ಕೆ ಈ ಯಾತ್ರೆಯ ಮೂಲಕವೇ ಮೊದಲ ಭೇಟಿ ನೀಡಲಿದ್ದು, ಇದಕ್ಕಾಗಿ ರಾಜ್ಯ ಕಾಂಗ್ರೆಸ್‌ ಸಾಕಷ್ಟುತಾಲೀಮು ನಡೆಸಿದೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರಿ ಬಹಿರಂಗ ಸಮಾರಂಭದಲ್ಲಿ ಮೂರ್ನಾಲ್ಕು ಲಕ್ಷ ಜನರನ್ನು ಸೇರಿಸಿ ತಮ್ಮ ಅಧ್ಯಕ್ಷರಿಗೆ ಭರ್ಜರಿ ಸ್ವಾಗತ ನೀಡಲಿದೆ. ಈ ಸಮಾರಂಭದ ನಂತರ ಜನಾಶೀರ್ವಾದ ರಾರ‍ಯಲಿಗೆ ಅಧಿಕೃತ ಚಾಲನೆ ದೊರೆಯಲಿದೆ.

ನಾಲ್ಕು ದಿನಗಳ ಈ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರು ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಒಂದು ಮಹಾ ರಾರ‍ಯಲಿ, ಹಲವು ರಾರ‍ಯಲಿಗಳು, ರೈತರು, ಆದಿವಾಸಿಗಳು, ವೃತ್ತಿಪರರು ಹಾಗೂ ಉದ್ಯಮಿ ಸಮುದಾಯದೊಂದಿಗೆ ಸಂವಾದ ಹಾಗೂ ರಾರ‍ಯಲಿಯ ಮಾರ್ಗದಾದ್ಯಂತ ಸಾಮಾನ್ಯ ಜನರೊಂದಿಗೆ ನೇರ ಸಂಪರ್ಕದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಜತೆಗೆ, ಈ ಭಾಗದ ಪ್ರಧಾನ ಸಮುದಾಯವಾದ ಲಿಂಗಾಯತ-ವೀರಶೈವ, ದಲಿತರು, ಮುಸ್ಲಿಮರನ್ನು ಓಲೈಸಲೋ ಎಂಬಂತೆ ಕೊಪ್ಪಳದ ಹುಲಿಗೆಮ್ಮ ದೇವಾಲಯ, ಗವಿಸಿದ್ದೇಶ್ವರ ಮಠ, ಕಲಬುರಗಿಯ ಖ್ವಾಜಾ ಬಂದೇ ನವಾಜ್‌ ದರ್ಗಾ ಮತ್ತು ವಿಶ್ವದ ಮೊದಲ ಧರ್ಮ ಸಂಸತ್ತು ಎನಿಸಿದ ಬೀದರ್‌ನ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ.

ಈ ಯಾತ್ರೆಯ ವೇಳೆ ರಾಜ್ಯದ ಎಲ್ಲಾ ಪ್ರಮುಖ ನಾಯಕರು ರಾಹುಲ್‌ ಅವರೊಂದಿಗೆ ಅವರ ಬಸ್‌ನಲ್ಲೇ ಸಂಚರಿಸಲಿದ್ದಾರೆ. ಜತೆಗೆ, ಯಾವ ಜಿಲ್ಲೆಯಲ್ಲಿ ರಾಹುಲ್‌ ಇರುತ್ತಾರೋ ಆ ಜಿಲ್ಲೆಯ ಪ್ರಮುಖ ನಾಯಕರು, ಶಾಸಕರು, ಸಂಸದರಿಗೆ ಬಸ್‌ನಲ್ಲಿ ಪ್ರವೇಶಾವಕಾಶವಿರುತ್ತದೆ. ಬಸ್‌ನಲ್ಲೇ ಅವರೊಂದಿಗೆ ಸಭೆಗಳನ್ನು ನಡೆಸಿ, ಸ್ಥಳೀಯ ಸ್ಥಿತಿಗತಿಯನ್ನು ಅರಿತುಕೊಳ್ಳಲಿದ್ದಾರೆ.

ಡಿಕೆಶಿ, ಲಾಡ್‌ ಪಣ: ರಾಹುಲ್‌ ಗಾಂಧಿ ಅವರ ರಾಜ್ಯಕ್ಕೆ ನೀಡಲಿರುವ ಈ ಮೊದಲ ಭೇಟಿಯನ್ನು ಅವಿಸ್ಮರಣೀಯಗೊಳಿಸಲು ಕಾಂಗ್ರೆಸ್‌ ನಾಯಕರು ಟೊಂಕ ಕಟ್ಟಿದ್ದಾರೆ. ವಿಶೇಷವಾಗಿ ಹೊಸಪೇಟೆಯ ರಾರ‍ಯಲಿ ಯಶಸ್ಸಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ತಮ್ಮೆಲ್ಲ ಸಾಮರ್ಥ್ಯವನ್ನು ಪಣಕ್ಕಿಟ್ಟಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಶುಕ್ರವಾರ ಹೊಸಪೇಟೆಗೆ ಆಗಮಿಸಿದ್ದು, ಸಿದ್ಧತೆಯ ಉಸ್ತುವಾರಿ ವಹಿಸಿಕೊಂಡು ಮಾರ್ಗದರ್ಶನ ಮಾಡುತ್ತಿದ್ದಾರೆ.

ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಸುಮಾರು 4 ಲಕ್ಷ ಜನರನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ. ಪ್ರತಿ ಗ್ರಾಮಗಳಿಂದಲೂ ಕಾರ್ಯಕರ್ತರನ್ನು ಕರೆತರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಶಾಸಕರಾದ ಭೀಮಾ ನಾಯ್ಕ, ನಾಗೇಂದ್ರ, ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿರುವ ಆನಂದ ಸಿಂಗ್‌ ಕಾಂಗ್ರೆಸ್‌ ಸೇರುತ್ತಿರುವುದು ಆ ಪಕ್ಷಕ್ಕೆ ಆನೆ ಬಲ ತಂದಿದೆ. ಅವರೆಲ್ಲರೂ ಈ ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಚಿವರು, ಸಂಸದರು, ಶಾಸಕರು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

1.25 ಲಕ್ಷ ಆಸನಗಳು: ಕಾಂಗ್ರೆಸ್‌ ಸಮಾವೇಶದ ಹಿನ್ನೆಲೆಯಲ್ಲಿ ತಾಲೂಕು ಕ್ರೀಡಾಂಗಣದಲ್ಲಿ 4.60 ಲಕ್ಷ ಚದರ ಅಡಿಯಲ್ಲಿ ಬೃಹತ್‌ ಸಮ್ಮೇಳನಾಂಗಣ ಸಜ್ಜುಗೊಳಿಸಲಾಗಿದೆ. ಅದರಲ್ಲಿ 40-100 ಚದರ ಅಡಿಯಲ್ಲಿ ಮುಖ್ಯ ವೇದಿಕೆ ನಿರ್ಮಿಸಲಾಗಿದ್ದು, ಕಾರ್ಯಕ್ರಮದಲ್ಲಿ 1.25 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯಲ್ಲಿ 25 ಎಲ್‌ಇಡಿ ಪರದೆಗಳು ಹಾಗೂ ಹೊರಗಡೆ 10 ಎಲ್‌ಇಡಿ ಬೃಹತ್‌ ಪರದೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ವೇದಿಕೆಯಿಂದ 1 ಕಿ.ಮೀ.ವರೆಗೆ ಭಾಷಣ ಕೇಳುವಂತೆ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಲಾಗಿದೆ.

ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅದಕ್ಕಾಗಿ ವೇದಿಕೆಯ ಸುತ್ತಮುತ್ತಲ ಪ್ರದೇಶದಲ್ಲಿ ಟ್ಯಾಂಕ್‌ ಮೂಲಕ 12 ಲಕ್ಷ ಲೀಟರ್‌ ನೀರಿನ ವ್ಯವಸ್ಥೆ ಮಾಡಲಾಗಿದೆ. 100 ಟ್ಯಾಪ್‌ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ವೇದಿಕೆಯಲ್ಲಿ 1 ಲಕ್ಷ ನೀರಿನ ಬಾಟಲ್‌ಗಳನ್ನು ಹಂಚುವ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ 2 ಲಕ್ಷಕ್ಕೂ ಅ​ಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.

ರಾರಾಜಿಸುತ್ತಿರುವ ಬ್ಯಾನರ್‌ಗಳು: ಕಾಂಗ್ರೆಸ್‌ ಸಮಾವೇಶ ಹಿನ್ನೆಲೆಯಲ್ಲಿ ನಗರದ ತಾಲೂಕು ಕ್ರೀಡಾಂಗಣದ ಸುತ್ತಮುತ್ತ ಹಾಗೂ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಮಾವೇಶಕ್ಕೆ ಹಾಗೂ ರಾಹುಲ್‌ ಗಾಂ​ಧಿ ಅವರನ್ನು ಸ್ವಾಗತಿಸುವ ಬ್ಯಾನರ್‌ಗಳು ರಾರಾಜಿಸುತ್ತಿವೆ. ನಗರದ ಕಾಲೇಜು ರಸ್ತೆ, ಟಿ.ಬಿ. ಡ್ಯಾಂ ರಸ್ತೆ, ಬಸ್‌ ನಿಲ್ದಾಣ ರಸ್ತೆ, ರೋಟರಿ ವೃತ್ತ, ಅಂಬೇಡ್ಕರ್‌ ವೃತ್ತ, ವಾಲ್ಮೀಕಿ ವೃತ್ತಗಳನ್ನು ಕಾಂಗ್ರೆಸ್‌ ಪಕ್ಷದ ಬ್ಯಾನರ್‌ಗಳು ಹಾಗೂ ಬಂಟಿಂಗ್ಸ್‌ಗಳಿಂದ ಸಿಂಗಾರ ಮಾಡಲಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಕಾಂಗ್ರೆಸ್‌ ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಹೊಸಪೇಟೆಗೆ ಹರಿದು ಬರುತ್ತಿದ್ದಾರೆ.

ಸೋನಿಯಾ ಇಲ್ಲಿಂದಲೇ ಸ್ಪರ್ಧಿಸಿದ್ದರು : ರಾಹುಲ್‌ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಈ ಹಿಂದೆ ಬಳ್ಳಾರಿ ಕ್ಷೇತ್ರದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಆ ಸಂದರ್ಭದಲ್ಲಿ ರಾಹುಲ್‌, ಪ್ರಿಯಾಂಕಾ ಗಾಂಧಿ ಸಹ ತಮ್ಮ ತಾಯಿಯ ಪರ ಪ್ರಚಾರಕ್ಕೆ ಇಲ್ಲಿಗೆ ಆಗಮಿಸಿದ್ದರು. ಹೊಸಪೇಟೆಯಲ್ಲೂ ಪ್ರಚಾರ ಕೈಗೊಂಡಿದ್ದರು. ಇದೀಗ ತಮ್ಮ ತಾಯಿ ಒಮ್ಮೆ ಪ್ರತಿನಿಧಿಸಿದ್ದ ಕ್ಷೇತ್ರದಿಂದಲೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ವಿಧಾನಸಭೆ ಚುನಾವಣೆಯ ತಮ್ಮ ಪ್ರಚಾರ ಕಾರ್ಯ ಆರಂಭಿಸುತ್ತಿದ್ದಾರೆ. ಪಕ್ಷದ ಅತ್ಯುನ್ನತ ಹುದ್ದೆ ಏರಿದ ಬಳಿಕ ರಾಜ್ಯ ಪ್ರವಾಸವನ್ನೂ ಇಲ್ಲಿಂದಲೇ ಆರಂಭಿಸುತ್ತಿದ್ದು, ಇದೊಂದು ಭಾವನಾತ್ಮಕ ಕ್ಷಣವಾಗಲಿದೆ.

ಇಂದಿರಾ, ರಾಜೀವ್‌ ಭೇಟಿ : 1978ರಲ್ಲಿ ಇಂದಿರಾ ಗಾಂಧಿ ಅವರು ಹಂಪಿ ಮತ್ತು ಹೊಸಪೇಟೆಯ ದೊಡ್ಡ ಸಮಾವೇಶದಲ್ಲಿ ಭಾಗವಹಿಸಿದ್ದರು. ತಾಲೂಕು ಕ್ರೀಡಾಂಗಣದಲ್ಲಿಯ ಕಟ್ಟೆಮೇಲೆ ಇಂದಿರಾ ಗಾಂಧಿ ಭಾಷಣ ಮಾಡಿದ್ದರಿಂದ ಈ ಕಟ್ಟೆಯು ತಾಲೂಕು ಕ್ರೀಡಾಂಗಣದಲ್ಲಿ ಈಗಲೂ ಇದೆ. ಇದೇ ರೀತಿಯಲ್ಲಿ ರಾಜೀವ್‌ ಗಾಂಧಿ ಸಹ ಹೊಸಪೇಟೆಯಲ್ಲಿ ಸಮಾವೇಶ ನಡೆಸಿದ್ದರು.

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಯುವ ಮತದಾರರನ್ನು ಪಕ್ಷದ ಪರ ಸೆಳೆಯಲು ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಮಾಹಿತಿ ನೀಡಲು ಕಾಂಗ್ರೆಸ್‌ ಮುಂದಾಗಿದ್ದು, ಇದಕ್ಕಾಗಿ ವಿಶೇಷ ಆಂದೋಲನವನ್ನು ಕೈಗೊಂಡಿದೆ. ರಾಜ್ಯದ ಯುವ ಜನರ ಆಶೋತ್ತರಗಳನ್ನು ಅರಿಯುವ ನೆಪದಲ್ಲಿ ಆಯೋಜಿಸಲಾಗಿರುವ ಈ ಆಂದೋಲನಕ್ಕೆ ‘ನನ್ನ ಕರ್ನಾಟಕ’ ಎಂದು ಹೆಸರಿಡಲಾಗಿದ್ದು, ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಈ ಆಂದೋಲನದ ಲಾಂಛನ ಬಿಡುಗಡೆ ಮಾಡಿದರು.

ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ : 4 ದಿನಗಳ ಯಾತ್ರೆ ವೇಳೆ ರಾಹುಲ್‌ ಗಾಂಧಿ ಹೈದ್ರಾಬಾದ್‌ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಕೊಪ್ಪಳದ ಹುಲಿಗೆಮ್ಮ ದೇವಾಲಯ, ಗವಿಸಿದ್ದೇಶ್ವರ ಮಠ, ಕಲಬುರಗಿಯ ಖ್ವಾಜಾ ಬಂದೇ ನವಾಜ್‌ ದರ್ಗಾ ಮತ್ತು ವಿಶ್ವದ ಮೊದಲ ಧರ್ಮ ಸಂಸತ್ತು ಎನಿಸಿದ ಬೀದರ್‌ನ ಬಸವಕಲ್ಯಾಣದ ಅನುಭವ ಮಂಟಪಕ್ಕೆ ರಾಹುಲ್‌ ಭೇಟಿ ಕಾರ್ಯಕ್ರಮವಿದೆ

loader