Asianet Suvarna News Asianet Suvarna News

ಫೆ.10ರಿಂದ 4 ದಿನ ರಾಹುಲ್ ರಾಜ್ಯ ಪ್ರವಾಸ : ಪ್ರವಾಸದ ವೇಳೆ ರಾಹುಲ್ ಕಾರ್ಯಕ್ರಮವೇನು..?

ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು ಫೆ.10ರಿಂದ 4 ದಿನ ಚುನಾವಣಾ ಪ್ರವಾಸ ಕೈಗೊಳ್ಳಲಿದ್ದಾರೆ. 10ರಂದು ಹೊಸಪೇಟೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ನಂತರ ವಿವಿಧೆಡೆ ರೋಡ್‌ಶೋ ನಡೆಸುವರು.

Rahul Gandhi Visit Karnataka On Feb 10

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು ಫೆ.10ರಿಂದ 4 ದಿನ ಚುನಾವಣಾ ಪ್ರವಾಸ ಕೈಗೊಳ್ಳಲಿದ್ದಾರೆ. 10ರಂದು ಹೊಸಪೇಟೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ನಂತರ ವಿವಿಧೆಡೆ ರೋಡ್‌ಶೋ ನಡೆಸುವರು.

ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಫೆ.10ರಿಂದ ನಾಲ್ಕು ದಿನಗಳ ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರ ಪ್ರವಾಸದ ರೂಪರೇಷೆಗಳನ್ನು ಕೆಪಿಸಿಸಿ ಅಂತಿಮಗೊಳಿಸಿದೆ. ಈ ಮೊದಲು ನಿಗದಿಪಡಿಸಿದ್ದ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿರುವ ಹೈಕಮಾಂಡ್ ಫೆ.10ರಂದು ಹೊಸಪೇಟೆಯಲ್ಲಿ ನಡೆಸಲು ಉದ್ದೇಶಿಸಿದ್ದ ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶವನ್ನು ರದ್ದುಗೊಳಿಸಿದೆ. ಬದಲಿಗೆ ಎಲ್ಲಾ ವರ್ಗಗಳ ಸಮಾವೇಶವನ್ನಾಗಿ ಮಾಡಿ ಬೃಹತ್ ಕಾರ್ಯಕ್ರಮದ ಮೂಲಕ ರಾಹುಲ್ ಗಾಂಧಿ ಪ್ರವಾಸಕ್ಕೆ ಭವ್ಯವಾಗಿ ಚಾಲನೆ ನೀಡಲು ಕೆಪಿಸಿಸಿ ಸಜ್ಜಾಗಿದೆ. ಜತೆಗೆ ಫೆ.10ರಿಂದ 12ರವರೆಗೆ ಮೂರು ದಿನಗಳು ಮಾತ್ರ ನಿಗದಿಯಾಗಿದ್ದ ಸಮಾವೇಶವನ್ನು ನಾಲ್ಕು ದಿನಗಳಿಗೆ ವಿಸ್ತರಿಸಲಾಗಿದೆ.

ಹೈದರಾಬಾದ್ ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ರಾಹುಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರ ಪ್ರವಾಸ ಅವಿಸ್ಮರಣೀಯಗೊಳಿಸಲು ಕೆಪಿಸಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ರಾಹುಲ್ ಮೊದಲ ಪ್ರವಾಸದಲ್ಲಿ ಕನಕಗುರು ಪೀಠ, ಬಸವ ಕಲ್ಯಾಣ ಹಾಗೂ ಗವಿ ಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ದರ್ಗಾಕ್ಕೂ ಭೇಟಿ ನೀಡಲಿರುವ ಅವರು ಅಲ್ಪಸಂಖ್ಯಾತರೊಂದಿಗೆ ಸಂವಾದ ನಡೆಸಲಿದ್ದಾರೆ.

ಫೆ.10 ಮಧ್ಯಾಹ್ನ 12.15ಕ್ಕೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬಳ್ಳಾರಿಯ ಜಿಂದಾಲ್ ಏರ್‌ಪೋರ್ಟ್‌ಗೆ ರಾಹುಲ್ ಆಗಮಿಸಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಬಳ್ಳಾರಿಯಿಂದ ಹೊಸಪೇಟೆಗೆ 1 ಗಂಟೆಗೆ ತಲುಪಲಿದ್ದಾರೆ. ಮಧ್ಯಾಹ್ನ 2.30ರವರೆಗೆ ಸಾರ್ವಜನಿಕ ಸಮಾವೇಶ ಉದ್ಘಾಟಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಹುಲ್ ಗಾಂಧಿಗೆ ಸ್ವಾಗತ ಕೋರಲಿದೆ. ಬಳಿಕ 3.30ಕ್ಕೆ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4.20ಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.40ಕ್ಕೆ ಲಿಂಗಾಯತರ ಪ್ರಮುಖ ಮಠವಾದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ.

ಸಂಜೆ 5.15ಕ್ಕೆ ಮಾರ್ಗ ಮಧ್ಯೆ ಕೊಪ್ಪಳ ಕಾರ್ಪೊರೇಷನ್ ಮೈದಾನದಲ್ಲಿ ಸಭೆ ನಡೆಸಲಿದ್ದಾರೆ. ಸಂಜೆ 6.45ಕ್ಕೆ ಯಲಬುರ್ಗ ವಿಧಾನಸಭಾ ಕ್ಷೇತ್ರದ ವಿದ್ಯಾನಂದ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾತ್ರಿ 8 ಗಂಟೆಯಿಂದ ಕೊಪ್ಪಳ ಜಿಲ್ಲೆ ಕುಕನೂರಿನ ಸರ್ಕಾರಿ ಅತಿಥಿಗೃಹಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ಫೆ.11ಕ್ಕೆ ಕೊಪ್ಪಳ, ರಾಯಚೂರು ಪ್ರವಾಸ: ಪ್ರವಾಸದ ಎರಡನೇ ದಿನ ಕೊಪ್ಪಳ ಹಾಗೂ ರಾಯಚೂರು ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.11ರಂದು ಕುಷ್ಟಗಿ ತಾಲೂಕು ಬೆಂಡಿ ಕ್ರಾಸ್‌ನಲ್ಲಿ ಬೆಳಗ್ಗೆ 10ಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಸ್ವಾಗತ ಸಮಾವೇಶ ಏರ್ಪಡಿಸಲಾಗಿದೆ. ಬೆಳಗ್ಗೆ 11.10ಕ್ಕೆ ಕುಷ್ಟಗಿಯಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1.15 ಕ್ಕೆ ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಸ್ವಾಗತ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ. ಮಧ್ಯಾಹ್ನ 2.05ಕ್ಕೆ ಗಂಗಾವತಿಯಲ್ಲಿ ಸ್ವಾಗತ ಸಮಾವೇಶ ಹಾಗೂ ಕಾರಟಗಿಯಲ್ಲಿ 3 ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ.

ಸಂಜೆ 4.45ಕ್ಕೆ ಅಂಚನಾಳ್ ಕ್ಯಾಂಪ್‌ನಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ಸಂಜೆ 5.15ಕ್ಕೆ ರಾಯಚೂರಿಗೆ ಆಗಮಿಸಲಿರುವ ಅವರು ಸಿಂಧನೂರು ಯುವ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 6ಕ್ಕೆ ಸಿಂಧನೂರಿನಲ್ಲಿ ರೈತ ಸಂಘದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ 7 ಗಂಟೆಗೆ ರಸ್ತೆ ಮೂಲಕ ಸಿಂಧನೂರಿನಿಂದ ರಾಯಚೂರು ಸರ್ಕ್ಯೂಟ್ ಹೌಸ್’ಗೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ.

 ರಾಯಚೂರು, ಯಾದಗಿರಿ ಕಲಬುರಗಿ ಪ್ರವಾಸ: ರಾಯಚೂರು ಸರ್ಕ್ಯೂಟ್‌ನಿಂದ ರಾಯಚೂರಿನ ಗುಂಜ್ ವೃತ್ತಕ್ಕೆ ಪ್ರಯಾಣ ಬೆಳೆಸಲಿರುವ ರಾಹುಲ್ ಅವರಿಗೆ ಅಲ್ಲಿ ಬೆಳಗ್ಗೆ 10ಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಭವ್ಯ ಸ್ವಾಗತ ಕೋರಲಿದ್ದಾರೆ. ಬೆಳಗ್ಗೆ 10.45ಕ್ಕೆ ಕಲ್ಮಾಳದಲ್ಲಿ ಕಾರ್ಯಕರ್ತರ ಸ್ವಾಗತ ಸಭೆ ನಡೆಯಲಿದೆ. ಬೆಳಗ್ಗೆ 11.20 ಕ್ಕೆ ಗಬ್ಬೂರಿನಲ್ಲಿ ಕಾರ್ಯಕರ್ತರು ಸ್ವಾಗತಿಸಲಿದ್ದಾರೆ.

ಮಧ್ಯಾಹ್ನ 12.15ಕ್ಕೆ ದೇವದುರ್ಗದಲ್ಲಿ ಬುಡಕಟ್ಟು ಸಮುದಾಯದವರ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಯಾದಗಿರಿ ಜಿಲ್ಲಾ ಪ್ರವಾಸ ಆರಂಭವಾಗಲಿದ್ದು, ಮಧ್ಯಾಹ್ನ 1.50ಕ್ಕೆ ಶಹಾಪುರ ನಗರದಲ್ಲಿ ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ಮಧ್ಯಾಹ್ನ 3.30 ಜೇವರ್ಗಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಫೆ.13ಕ್ಕೆ ಕಲಬುರ್ಗಿ, ಬೀದರ್ ಪ್ರವಾಸ: ನಾಲ್ಕನೇ ದಿನವಾದ ಫೆ.13ರಂದು ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬೆಳಗ್ಗೆ 10ಕ್ಕೆ ಎಚ್‌ಕೆಇಎಸ್ ಸಭಾಂಗಣದಲ್ಲಿ ವೃತ್ತಿಪರರು ಹಾಗೂ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

Follow Us:
Download App:
  • android
  • ios