ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಜನವರಿ ಮಾಸದಲ್ಲಿ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಜನವರಿ ಎರಡನೇ ವಾರದಲ್ಲಿ ಮೂರು ದಿನ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದು, ಅವರ ಯಾತ್ರೆಯ ರೂಪರೇಷೆ ಸಿದ್ಧಪಡಿಸುವಂತೆ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ತಿಳಿಸಿದೆ.
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಅವರು ಜನವರಿ ಮಾಸದಲ್ಲಿ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಜನವರಿ ಎರಡನೇ ವಾರದಲ್ಲಿ ಮೂರು ದಿನ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದು, ಅವರ ಯಾತ್ರೆಯ ರೂಪರೇಷೆ ಸಿದ್ಧಪಡಿಸುವಂತೆ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಶುಕ್ರವಾರ ತಡರಾತ್ರಿವರೆಗೂ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಅವರು ಜ.15ರಿಂದ 25ರ ಅವಧಿಯಲ್ಲಿ ಯಾವುದೇ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲು ತಮ್ಮ ಸಮಯ ನೀಡಲು ಸಿದ್ಧರಿದ್ದಾರೆ.
ಯಾವ ದಿನ ಮತ್ತು ಎಲ್ಲಿ ಯಾವ ಕಾರ್ಯಕ್ರಮ ರೂಪಿಸಲಾಗುವುದು ಎಂಬ ಬಗ್ಗೆ ವಿವರ ನೀಡಿ ಎಂದು ಹೈಕಮಾಂಡ್ ರಾಜ್ಯ ನಾಯಕತ್ವವನ್ನು ಕೋರಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿಯವರೆಗೂ ರಾಜ್ಯ ಮುಖಂಡರ ಸಭೆ ನಡೆದಿದೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣು ಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್. ಆರ್. ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.
ಮೂಲಗಳ ಪ್ರಕಾರ ಕೆಪಿಸಿಸಿ, ಮಹಿಳಾ ಕಾಂಗ್ರೆಸ್, ಎಸ್ಸಿ ಘಟಕ, ರೈತ ಘಟಕ ಹಾಗೂ ವಿದ್ಯಾರ್ಥಿ ಘಟಕಕ್ಕೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಲು ಸೂಚಿಸಲಾಗಿದೆ. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಅವರನ್ನು ಸ್ವಾಗತಿಸಲು ಕೆಪಿಸಿಸಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ನಡುವೆ, ಮಹಿಳಾ ಕಾಂಗ್ರೆಸ್ ಬೆಳಗಾವಿಯಲ್ಲಿ, ಎಸ್ಸಿ ಘಟಕ ಬಳ್ಳಾರಿ ಅಥವಾ ರಾಯಚೂರಿನಲ್ಲಿ ಸಮಾವೇಶ ಆಯೋಜಿಸಲು ಉದ್ದೇಶಿಸಿದ್ದರೆ ರೈತ ಹಾಗೂ ವಿದ್ಯಾರ್ಥಿ ಘಟಕವು ಬೆಂಗಳೂರಿನಲ್ಲಿ ರಾಹುಲ್ ಅವರೊಂದಿಗೆ ರೈತರು ಹಾಗೂ ವಿದ್ಯಾರ್ಥಿಗಳ ಸಂವಾದ ಆಯೋಜಿಸಲು ಉದ್ದೇಶಿಸಿದೆ ಎನ್ನಲಾಗಿದೆ.
