ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸಕ್ಕೆ ಕಡೆಗೂ ಮುಹೂರ್ತ ಕೂಡಿ ಬಂದಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಜ.27ರಂದು ರಾಜ್ಯಕ್ಕೆ ರಾಹುಲ್ ಆಗಮಿಸಲಿದ್ದು, 3 ದಿನಗಳ ಕಾಲ 4 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು (ಜ.05): ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸಕ್ಕೆ ಕಡೆಗೂ ಮುಹೂರ್ತ ಕೂಡಿ ಬಂದಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಜ.27ರಂದು ರಾಜ್ಯಕ್ಕೆ ರಾಹುಲ್ ಆಗಮಿಸಲಿದ್ದು, 3 ದಿನಗಳ ಕಾಲ 4 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯನ್ನು ಅವಿಸ್ಮರಣೀಯಗೊಳಿಸಲು ಕೆಪಿಸಿಸಿ ಸಜ್ಜಾಗಿದೆ. ಜ.27ರಂದು ಹೊಸಪೇಟೆಯಲ್ಲಿ ನಡೆಯಲಿರುವ ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶ ದಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಇದೇ ವೇಳೆ ಕೂಡ್ಲಿಗಿ ಕ್ಷೇತ್ರದ ಪಕ್ಷೇತರ ಶಾಸಕ ಎಂ. ನಾಗೇಂದ್ರ ಕಾಂಗ್ರೆಸ್ ಸೇರ್ಪಡೆ ಯಾಗುವ ಸಾಧ್ಯತೆ ಇದೆ.

 ಮೊದಲ ಅವಧಿಗೆ ಬಿಜೆಪಿ ಶಾಸಕರಾಗಿ ಜಯ ಗಳಿಸಿ ಬಳಿಕ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಎಂ. ನಾಗೇಂದ್ರ ಸೇರ್ಪಡೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಬಲ ವೃದ್ಧಿಯಾಗಲಿದೆ. ಜ.28ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ವಿದುರಾಶ್ವತ್ಥದಲ್ಲಿ ರಾಹುಲ್ ಗಾಂಧಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಜ.28ರಂದು ಮಧ್ಯಾಹ್ನದ ಬಳಿಕ ಮೈಸೂರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜ.29 ರಂದು ಬೆಂಗಳೂರು ನಗರದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಜ.28ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಅದಾದ ಮರುದಿನವೇ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ರ್ಯಾಲಿ ಆಯೋಜನೆಯಾಗಿರುವುದು ಗಮನಾರ್ಹ.