ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಶನಿವಾರ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿದಂಬರಂ ಸೇರಿ ಹಲವು ಹಿರಿಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಸಿಡಬ್ಲ್ಯುಸಿ ಸಭೆಯಲ್ಲಿ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಲಿಷ್ಠ ಸ್ಥಳೀಯ ನಾಯಕರನ್ನು ಪಕ್ಷ ಬೆಳೆಸಬೇಕಾಗಿದೆ ಎಂದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ರಾಹುಲ್, ಕಾಂಗ್ರೆಸ್ ಎಲ್ಲಿ ಅಧಿಕಾರದಲ್ಲಿದೆಯೋ ಅಲ್ಲಿಯೂ ತೀವ್ರ ಕಳಪೆ ಸಾಧನೆ ಮಾಡಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಅವರು ತಮ್ಮ ಮಕ್ಕಳಿಗೆ ಟಿಕೆಟ್ ಬೇಕು ಎಂದು ಕೋರಿಕೆ ಇಟ್ಟರು. 

ಅದು ನನಗೆ ಇಷ್ಟವಿರಲಿಲ್ಲ. ಅದೇ ರೀತಿ ಕೇಂದ್ರ ದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೂ ಪಕ್ಷಕ್ಕಿಂತ ತಮ್ಮ ಮಗನ ಹಿತಾಸಕ್ತಿಯೇ ಮುಖ್ಯವಾಯಿತು ಎಂದು ರಾಹುಲ್ ಚಾಟಿ ಬೀಸಿದರು ಎನ್ನಲಾಗಿದೆ. ಭಾಷಣ ಮಾಡುವಾಗ ಉದ್ವೇಗಗೊಂಡಂತೆ ಕಂಡುಬಂದ ರಾಹುಲ್, ಪ್ರಚಾರದ ವೇಳೆ ಬಿಜೆಪಿ ಹಾಗೂ ಮೋದಿ ವಿರುದ್ಧ ನಾನು ಪ್ರಸ್ತಾಪಿಸಿದ ವಿಚಾರಗಳನ್ನು ಯಾರೊಬ್ಬರೂ ಮುಂದುವರಿಸಿಕೊಂಡು ಹೋಗಲಿಲ್ಲ.