ನವದೆಹಲಿ(ಮೇ.08): ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿದ್ದ ರಾಹುಲ್ ಗಾಂಧಿ, ಇಂದು ಸರ್ವೋಚ್ಛ ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆ ಕೋರಿದ್ದಾರೆ.

ಈ ಕುರಿತು ಹೊಸ ಅಫಿಡವಿಟ್ ಸಲ್ಲಿಸಿರುವ ರಾಹುಲ್ ಗಾಂಧಿ, ಚೌಕಿದಾರ್ ಚೋರ್ ಹೇ ಘೋಷಣೆಯಲ್ಲಿ ಸುಪ್ರೀಂಕೋರ್ಟ್ ನ್ನು ಎಳೆದು ತರುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ, ‘ಚೌಕಿದಾರ್ ಚೋರ್ ಹೇ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂಬ ಹೇಳಿಕೆ ಉದ್ದೇಶ ಪೂರ್ವಕವಲ್ಲದ ಮತ್ತು ಅಜಾಗರೂಕ ಹೇಳಿಕೆಯಾಗಿದೆ. ಹೀಗಾಗಿ ನಾನು ಘನ ನ್ಯಾಯಾಲಯವನ್ನು ಬೇಷರತ್ ಕ್ಷಮೆ ಯಾಚಿಸುತ್ತಿದ್ದೇನೆ..’ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಏ.30ರಂದೇ ರಾಹುಲ್ ಸುಪ್ರೀಂಕೋರ್ಟ್ ಕ್ಷಮೆ ಕೋರಿದ್ದರೂ, ಕ್ಷಮಾಪಣಾ ಪ್ರಮಾಣಪತ್ರದ ಕುರಿತು ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿತ್ತು.