ಅಮೆರಿಕದ ಅನಾಲಿಟಿಕಾದಿಂದ ಕಾಂಗ್ರೆಸ್‌ಗೆ ಪ್ರಾತ್ಯಕ್ಷಿಕೆ ಮತದಾರರ ಅಭಿರುಚಿ ತಿಳಿದು ಪ್ರಚಾರ ತಂತ್ರ ಸಿದ್ಧ
ನವದೆಹಲಿ: ಒಂದಾದ ಮೇಲೊಂದರಂತೆ ಚುನಾವಣೆಗಳನ್ನು ಗೆಲ್ಲುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿಯನ್ನು ಸಾಂಪ್ರದಾಯಿಕ ರಾಜಕೀಯ ತಂತ್ರಗಳಿಂದ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂಬ ನಿಲುವಿಗೆ ಬಂದಂತಿರುವ ಕಾಂಗ್ರೆಸ್, ಹೊಸ ಅಸ್ತ್ರವೊಂದನ್ನು ಹುಡುಕಿಕೊಂಡಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರ ಹಿಂದೆ ಮಹತ್ವದ ಪಾತ್ರ ವಹಿಸಿತು ಎನ್ನಲಾದ, ಇಂಟರ್ನೆಟ್ ದತ್ತಾಂಶ ಆಧರಿಸಿ ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಅಮೆರಿಕ ಮೂಲದ ಕಂಪನಿ ಕೇಂಬ್ರಿಜ್ ಅನಾಲಿಟಿಕಾ ಜತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಈ ಅಸ್ತ್ರವನ್ನು ಕಾಂಗ್ರೆಸ್ ಬಳಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ. ಗ್ರಾಹಕರು ಅಂದರೆ ಮತದಾರರು ಆನ್’ಲೈನ್ ಸರ್ಚ್ ಎಂಜಿನ್, ಇ-ಮೇಲ್ ಹಾಗೂ ಶಾಪಿಂಗ್ ವೆಬ್ಸೈಟ್ಗಳನ್ನು ಬಳಸುವ ಸಂದರ್ಭದಲ್ಲಿ ತಮ್ಮ ಆಯ್ಕೆಯ ಸುಳಿವನ್ನು ಬಿಟ್ಟಿರುತ್ತಾರೆ. ಅಂತಹ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ ರಾಜಕೀಯ ಪಕ್ಷಗಳು, ನಾಯಕರಿಗೆ ಈ ಸಂಸ್ಥೆ ಸಲಹೆ ಮಾಡುತ್ತದೆ. ನಿರ್ದಿಷ್ಟ ಸಮುದಾಯ ಅಥವಾ ಗುಂಪುಗಳನ್ನು ಆಧರಿಸಿ ತಂತ್ರಗಾರಿಕೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಎಲ್ಲರೂ ಲಘುವಾಗಿ ಪರಿಗಣಿಸಿದ್ದರು. ಆದರೆ ಈ ಸಂಸ್ಥೆಯ ನೆರವು ಪಡೆದು ತಮ್ಮ ರಾಜಕೀಯ ತಂತ್ರಗಳನ್ನು ಟ್ರಂಪ್ ಬದಲಿಸಿಕೊಂಡರು. ಬಲಪಂಥೀಯ ಮತದಾರರನ್ನು ಗುರಿಯಾಗಿಸಿಕೊಂಡು ಹಲವು ಸಂದೇಶಗಳನ್ನು ನೀಡಿದ್ದ ಟ್ರಂಪ್, ಜತೆಗೆ ಹಲವು ರಾಜ್ಯಗಳಲ್ಲಿ ಗೆಲುವು ನಿರ್ಧರಿಸುವ ಸಾಮರ್ಥ್ಯ ಹೊಂದಿರುವ ಹಿಂದು ವಲಸಿಗರಿಗೆ ಗಾಳ ಹಾಕಿದ್ದಕ್ಕೂ ಕೇಂಬ್ರಿಜ್ ಅನಾಲಿಟಿಕಾ ನೀಡಿದ ಮಾಹಿತಿಯೇ ಕಾರಣ ಎಂದು ಹೇಳಲಾಗಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯುಪಿಎಗೆ ರಾಜಕೀಯ ತಂತ್ರಗಾರಿಕೆ ರೂಪಿಸಿಕೊಡುವ ಕುರಿತಂತೆ ಈಗಾಗಲೇ ಹಲವು ಪ್ರತಿಪಕ್ಷ ನಾಯಕರನ್ನು ಕೇಂಬ್ರಿಜ್ ಅನಾಲಿಟಿಕಾ ಸಿಇಒ ಅಲೆಕ್ಸಾಂಡರ್ ಅವರು ಭೇಟಿ ಮಾಡಿ ಚರ್ಚಿಸಿದ್ದಾರೆ. ಆನ್ಲೈನ್ ಮೂಲಕ ಮತದಾರರನ್ನು ಸೆಳೆಯುವ ಕುರಿತಂತೆ ಕಾಂಗ್ರೆಸ್ಸಿಗೂ ಪ್ರಾತ್ಯಕ್ಷಿಕೆ ನೀಡಿದ್ದಾರೆ ಎನ್ನಲಾಗಿದೆ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಇದೇ ರೀತಿಯ ತಂತ್ರಗಾರಿಕೆಯನ್ನು ಬಳಸಿತ್ತು. ಅದರಲ್ಲಿ ಯಶಸ್ವಿಯೂ ಆಗಿತ್ತು. ಹೀಗಾಗಿ ಕಾಂಗ್ರೆಸ್ ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆಯ ಮೊರೆ ಹೋಗಿದೆ ಎನ್ನಲಾಗಿದೆ.
