ಮಹದಾಯಿ ಮೌನ ಮುರಿದ ರಾಹುಲ್ : ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹ

First Published 27, Feb 2018, 7:24 AM IST
Rahul Gandhi Talk About Mahadayi Issue
Highlights

ಮಹದಾಯಿ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಂಬೈ ಕರ್ನಾಟಕ ಪ್ರವಾಸದ ಕೊನೇ ದಿನ ಮೌನ ಮುರಿದಿದ್ದಾರೆ. ‘ನಿಮಗೆ ರೈತರ ಬಗ್ಗೆ ಗೌರವವಿದ್ದರೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ಸಮಸ್ಯೆ ತಕ್ಷಣ ಬಗೆಹರಿಸಿ’ ಎಂದು ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಈ ಮೂಲಕ ವಿವಾದದ ಚೆಂಡನ್ನು ಮೋದಿಯೆಡೆಗೆ ಎಸೆಯುವ ಮೂಲಕ ಬಿಜೆಪಿಗೆ ಬಲವಾದ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ/ಕಲಬುರಗಿ: ಮಹದಾಯಿ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಂಬೈ ಕರ್ನಾಟಕ ಪ್ರವಾಸದ ಕೊನೇ ದಿನ ಮೌನ ಮುರಿದಿದ್ದಾರೆ. ‘ನಿಮಗೆ ರೈತರ ಬಗ್ಗೆ ಗೌರವವಿದ್ದರೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ಸಮಸ್ಯೆ ತಕ್ಷಣ ಬಗೆಹರಿಸಿ’ ಎಂದು ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಈ ಮೂಲಕ ವಿವಾದದ ಚೆಂಡನ್ನು ಮೋದಿಯೆಡೆಗೆ ಎಸೆಯುವ ಮೂಲಕ ಬಿಜೆಪಿಗೆ ಬಲವಾದ ತಿರುಗೇಟು ನೀಡಿದ್ದಾರೆ.

ಮೌನ ಮುರಿದ ರಾಹುಲ್‌: ಮುಂಬೈ ಕರ್ನಾಟಕ ಪ್ರದೇಶದಲ್ಲಿ ರಾಹುಲ್‌ ಗಾಂಧಿ ಎರಡನೇ ಹಂತದ ‘ಜನಾಶೀರ್ವಾದ ಯಾತ್ರೆ’ ಆರಂಭಿಸುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಮಹಾದಾಯಿ ಬಗ್ಗೆ ರಾಹುಲ್‌ ಗಾಂಧಿ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಆಗ್ರಹಿಸುತ್ತಲೇ ಇದ್ದರು. ಮಹದಾಯಿ ಹೋರಾಟಗಾರರ ಒತ್ತಾಯವೂ ಇದುವೇ ಆಗಿತ್ತು. ಆದರೆ ಮೊದಲೆರಡು ದಿನ ಮೌನವಾಗಿದ್ದ ರಾಹುಲ್‌ ಬೆಳಗಾವಿ ಜಿಲ್ಲೆ ಸವದತ್ತಿ ಬಳಿ ಸೋಮವಾರ ಧರಣಿ ಕುಳಿತಿದ್ದ ಮಹದಾಯಿ ಹೋರಾಟಗಾರರೆಡೆ ಕೈಬೀಸಿ ಮುಂದೆ ಸಾಗಿದ್ದು ನಿರಾಸೆಗೆ ಕಾರಣವಾಗಿತ್ತು. ಆದರೆ, ನಂತರ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ರಾತ್ರಿ ನಡೆದ ಯಾತ್ರೆಯ ಸಮಾರೋಪದಲ್ಲಿ ಮಾತ್ರ ಮಹದಾಯಿ ವಿಷಯ ಪ್ರಸ್ತಾಪಿಸಿ, ಬಿಜೆಪಿಗೆ ಟಾಂಗ್‌ ನೀಡಿದರು.

ರಾಹುಲ್‌ ಗಾಂಧಿ ‘ಇಲ್ಲಿನ ಜನತೆ ಕುಡಿಯುವ ನೀರಿಗಾಗಿ ವರ್ಷಗಟ್ಟಲೇ ಹೋರಾಡುತ್ತಿದ್ದಾರೆ. ಕುಂಟು ನೆಪ ಹೇಳದೆ, ತಕ್ಷಣ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ನಿಮ್ಮ ಮಧ್ಯಸ್ಥಿಕೆಯಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸಿ’ ಎಂದು ಪ್ರಧಾನಿಗೆ ತಾಕೀತು ಮಾಡಿದಾಗ ನೆರೆದಿದ್ದ ಅಪಾರ ಜನಸ್ತೋಮ ಕರತಾಡನಗೈಯಿತು.

ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇದು. ಕುಡಿಯುವ ನೀರಿನ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಈ ಭಾಗದ ಜನತೆಯ ನೋವಿಗೆ ಸ್ಪಂದಿಸಲು ತಡಮಾಡದೇ ಮುಖ್ಯಮಂತ್ರಿಗಳ ಸಭೆ ಕರೆತಯವಂತೆ ಪ್ರಧಾನಿಯನ್ನು ರಾಹುಲ್‌ ಆಗ್ರಹಿಸಿದರು.

ಇಂದಿರಾ ಮಾದರಿಯಾಗಲಿ: ರಾಹುಲ್‌ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಹದಾಯಿ ವಿಷಯ ಪ್ರಸ್ತಾಪಿಸಿ, ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತೆಲುಗು-ಗಂಗಾ ಸಮಸ್ಯೆ ಬಗೆಹರಿಸಿದ ಮಾದರಿಯಲ್ಲಿ ಈ ಮಹದಾಯಿ ಸಮಸ್ಯೆ ಪರಿಹರಿಸುವಂತೆ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದರು.

ಗೋವಾ ಸಿಎಂ ಬರೆದ ಪತ್ರವನ್ನು ಈ ಹಿಂದೆ ಓದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಿಲುವನ್ನು ತರಾಟೆಗೆ ತೆಗೆದುಕೊಂಡ ಅವರು, ಮಹದಾಯಿ ವಿಷಯದಲ್ಲಿ ಬಿಜೆಪಿ ಮೊದಲಿನಿಂದಲೂ ರಾಜಕೀಯ ಮಾಡುತ್ತಾ ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಯಡಿಯೂರಪ್ಪ ದೊಡ್ಡ ನಾಟಕವನ್ನೇ ಆಡಿದರು. ಪತ್ರ ಓದಿ ಗೇಲಿಗೆ ಒಳಗಾಗಿದ್ದರೂ ಇನ್ನೂ ರಾಜಕೀಯ ಮಾಡುತ್ತಿದ್ದಾರೆ. ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಹೋದಾಗ ರಾಜ್ಯದ ಯಾವುದೇ ಸಂಸದರು ಮೋದಿ ಎದುರು ತುಟಿ ಬಿಚ್ಚುವುದಿಲ್ಲ. ಇಲ್ಲಿ ಮಾತ್ರ ರಾಜಕೀಯ ಬಿಡುತ್ತಿಲ್ಲ ಎಂದು ಬಿಜೆಪಿಗರ ವಿರುದ್ಧ ಚಾಟಿ ಬೀಸಿದರು.

ಸಭೆ ಕರೆಯುವಂತೆ ಪ್ರಧಾನಿಗೆ ಅನೇಕ ಪತ್ರಗಳನ್ನು ಬರೆದಿದ್ದೇನೆ. ಈವರೆಗೆ ಯಾವುದಕ್ಕೂ ಉತ್ತರ ಬಂದಿಲ್ಲ. ಈಗಲಾದರೂ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಅನಂತಕುಮಾರ್‌, ಜಗದೀಶ್‌ ಶೆಟ್ಟರ್‌, ಪ್ರಹ್ಲಾದ್‌ ಜೋಶಿ ಅವರು ಪ್ರಧಾನಿ ಮೋದಿ ಅವರನ್ನು ಮಧ್ಯಸ್ಥಿಕೆಗೆ ಒಪ್ಪಿಸಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ಏರ್ಪಾಡು ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ಮೈದಾನದಲ್ಲಿ ಪತ್ರ ಓದಿದ್ದ ಬಿಎಸ್‌ವೈ

ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಡಿ.21 ರಂದು ಇದೇ ನೆಹರು ಮೈದಾನದಲ್ಲಿ ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ತಮಗೆ ಬರೆದ ಪತ್ರವನ್ನು ಓದಿ ಜನತೆಯನ್ನು ನಿರಾಸೆಗೊಳಿಸಿದ್ದರು. ಇಂದು ಇದೇ ನೆಲದಲ್ಲಿ ನಿಂತು ರಾಹುಲ್‌ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಅವರು ಮಹದಾಯಿ ಪರ ಮಾತನಾಡಿ ಬಿಜೆಪಿಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಹೋರಾಟಗಾರರ ಭೇಟಿ ರದ್ದು

ಹುಬ್ಬಳ್ಳಿಯ ರಾರ‍ಯಲಿಯಲ್ಲಿ ಪಾಲ್ಗೊಂಡ ಬಳಿಕ ರಾಹುಲ್‌ ಗಾಂಧಿ ಅವರು ನಗರದ ಕೌಂಟಿ ಕ್ಲಬ್‌ನಲ್ಲಿ ಮಹದಾಯಿ ಹೋರಾಟಗಾರರ ಜತೆಗೆ 15 ನಿಮಿಷ ಮಾತುಕತೆ ನಡೆಸಲು ನಿರ್ಧರಿಸಿದ್ದರು. ಆದರೆ, ನಿಗದಿತ ಕಾರ್ಯಕ್ರಮಗಳು ವಿಳಂಬವಾಗಿ ನಡೆದಿದ್ದರಿಂದ ಅನಿವಾರ್ಯವಾಗಿ ಮಹದಾಯಿ ಹೋರಾಟಗಾರರ ಜತೆಗಿನ ಭೇಟಿಯನ್ನು ರದ್ದು ಮಾಡಿ ರಾಹುಲ್‌ ವಿಮಾನದ ಮೂಲಕ ದೆಹಲಿಗೆ ಹಿಂತಿರುಗಬೇಕಾಯಿತು. ಆದರೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲೇ ಸಿಗುವ ಕೌಂಟಿ ಕ್ಲಬ್‌ನ ಹೊರಗೆ ನಿಂತಿದ್ದ ಹೋರಾಟಗಾರರತ್ತ ರಾಹುಲ್‌ ಕೈ ಬೀಸಿ ಮುಂದೆ ಸಾಗಿದರು.

loader