ನವದೆಹಲಿ (ಡಿ. 04): 750 ಕೆ.ಜಿ. ಈರುಳ್ಳಿ ಮಾರಾಟ ಮಾಡಿದ ಮಹಾರಾಷ್ಟ್ರ ರೈತನೊಬ್ಬನಿಗೆ ಕೇವಲ 1040 ರು. ಸಿಕ್ಕ ವರದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಾ ಪ್ರಹಾರ ನಡೆಸಿದ್ದಾರೆ. ಪ್ರಧಾನಮಂತ್ರಿಗಳು ದೇಶದಲ್ಲಿ ಎರಡು ರೀತಿಯ ಭಾರತ ಸೃಷ್ಟಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

‘ಮೋದಿ ಅವರು ಎರಡು ಹಿಂದುಸ್ತಾನಗಳನ್ನು ಸೃಷ್ಟಿಸುತ್ತಿದ್ದಾರೆ. ಒಂದು ಅನಿಲ್‌ ಅಂಬಾನಿ ಅವರಿಗೆ. ಏನನ್ನೂ ಮಾಡದೇ, ಏರೋಪ್ಲೇನ್‌ ಮಾಡುವುದು ಗೊತ್ತಿಲ್ಲದೇ 30 ಸಾವಿರ ಕೋಟಿ ರು. ಮೌಲ್ಯದ ರಫೇಲ್‌ ಗುತ್ತಿಗೆಯನ್ನು ಅಂಬಾನಿ ಪಡೆಯುತ್ತಾರೆ. ಮೋದಿ ಅವರ ಮತ್ತೊಂದು ಹಿಂದುಸ್ತಾನ ರೈತರಿಗೆ. ನಾಲ್ಕು ತಿಂಗಳ ಕಾಲ ಉಳುಮೆ ಮಾಡಿ 750 ಕೆ.ಜಿ. ಈರುಳ್ಳಿ ಬೆಳೆದರೂ ಮೋದಿ ಅವರಿಂದ ರೈತನಿಗೆ ಕೇವಲ 1040 ರು. ಲಭಿಸುತ್ತದೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.