ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮೋದಿ ಅವರೊಬ್ಬ ‘ಕಳ್ಳ’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ.

2-3 ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ಸಾರ್ವಜನಿಕ ರಾರ‍ಯಲಿಯೊಂದನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ರಾಹುಲ್‌, ಪ್ರಧಾನಿ ಮೋದಿ ಅವರು ದೇಶದ ಚೌಕಿದಾರ (ವಾಚ್‌ಮ್ಯಾನ್‌) ಆಗಲು ಬಯಸುತ್ತಿದ್ದಾರೆ. ಆದರೆ ಚೌಕಿದಾರನೇ ಕಳ್ಳ ಎಂಬುದು ನಮಗೆ ಮನವರಿಕೆಯಾಗಿದೆ. ದೇಶದ ಜನರೆಲ್ಲಾ ಚೌಕಿದಾರನೇ ಕಳ್ಳನಾಗಿದ್ದಾನೆ ಎಂದು ದನಿ ಎತ್ತುತ್ತಿದ್ದಾರೆ ಎಂದು ಹರಿಹಾಯ್ದರು. ಇದಕ್ಕೆ ತಕ್ಷಣವೇ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್‌ ನಾಯಕನಿಗೆ ಪ್ರಧಾನಿ ಹುದ್ದೆಯ ಕುರಿತು ಯಾವುದೇ ಗೌರವ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟಾಂಗ್‌ ಕೊಟ್ಟಿದ್ದಾರೆ.

ರಾಹುಲ್‌ ಹೇಳಿದ್ದೇನು?:

ರಫೇಲ್‌ ಯುದ್ಧ ವಿಮಾನ ಒಪ್ಪಂದ ಹಾಗೂ ಉದ್ಯಮಿ ವಿಜಯ್‌ ಮಲ್ಯ ಅವರನ್ನು ವಿದೇಶದಿಂದ ವಾಪಸ್‌ ಕರೆಸಿಕೊಳ್ಳುವುದರಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಅನುಭವಿಸಿದೆ ಎಂದು ಡುಂಗರ್‌ಪುರದ ರಾರ‍ಯಲಿಯಲ್ಲಿ ಮಾತಿಗಿಳಿದ ರಾಹುಲ್‌, ನರೇಂದ್ರ ಮೋದಿ ಅವರು, ಈ ದೇಶದ ಪ್ರಧಾನಿಯಾಗಲು ಬಯಸಿರಲಿಲ್ಲ. ಅವರು ಚೌಕಿದಾರ ಆಗುವ ಉದ್ದೇಶ ಹೊಂದಿದ್ದರು. ಈಗ ದೇಶದ ಬೀದಿಗಳಲ್ಲಿ ಚೌಕಿದಾರನೇ ಕಳ್ಳ ಎಂಬ ಮಾತು ಕೇಳಿಬರುತ್ತಿದೆ. ‘ಗಲಿ ಗಲಿ ಮೇ ಶೋರ್‌ ಹೇ, ಹಿಂದುಸ್ತಾನ್‌ ಕಾ ಚೌಕಿದಾರ್‌ ಚೋರ್‌ ಹೇ’ (ಗಲ್ಲಿ ಗಲ್ಲಿಗಳಲ್ಲೂ ಹೇಳುತ್ತಿದ್ದಾರೆ, ಹಿಂದುಸ್ತಾನದ ಪ್ರಧಾನಿ ಕಳ್ಳ) ಎಂದು ಹಿಂದಿಯಲ್ಲಿ ಹೇಳಿದರು.

ಕೃಷಿ ಸಾಲ ಮನ್ನಾ ಮಾಡುವಂತೆ ರೈತರು ಮೋದಿ ಅವರನ್ನು ಬೇಡುತ್ತಿದ್ದಾರೆ. 15 ಕೈಗಾರಿಕೋದ್ಯಮಿಗಳ 1.50 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡುವ ಮೋದಿ, ರೈತರ ಸಾಲವನ್ನೇಕೆ ಮನ್ನಾ ಮಾಡುತ್ತಿಲ್ಲ? ಈ ಬಗ್ಗೆ ಕೇಳಿದರೆ ಮೌನವಾಗಿರುತ್ತಾರೆ ಎಂದು ಚಾಟಿ ಬೀಸಿದರು.

ರಫೇಲ್‌ ಯುದ್ಧ ವಿಮಾನ ಒಪ್ಪಂದ ವಿಚಾರವಾಗಿ ಉದ್ಯಮಿ ಅನಿಲ್‌ ಅಂಬಾನಿ ಅವರ ವಿರುದ್ಧವೂ ಹರಿಹಾಯ್ದ ರಾಹುಲ್‌, ಬೆಂಗಳೂರು ಮೂಲದ ಎಚ್‌ಎಎಲ್‌ಗೆ 70ಕ್ಕೂ ಅಧಿಕ ವರ್ಷಗಳ ಅನುಭವವಿತ್ತು. ಮೋದಿ ಅವರು ಅನಿಲ್‌ ಅಂಬಾನಿ ಜತೆ ಫ್ರಾನ್ಸ್‌ಗೆ ಹೋದರು. ಎಚ್‌ಎಎಲ್‌ಗೆ ಸಿಗಬೇಕಿದ್ದ ಒಪ್ಪಂದವನ್ನು ಕದ್ದು ರಿಲಯನ್ಸ್‌ಗೆ ನೀಡಿದರು. ಅನಿಲ್‌ ಅಂಬಾನಿ ತನ್ನ ಜೀವನದಲ್ಲೇ ಒಂದೂ ವಿಮಾನ ತಯಾರಿಸಿಲ್ಲ. ಆದಾಗ್ಯೂ ರಕ್ಷಣಾ ಸಚಿವರನ್ನು ಒಂದು ಮಾತೂ ಕೇಳದೇ ಮೋದಿ ಅವರು ಅಂಬಾನಿಗೆ ಗುತ್ತಿಗೆ ನೀಡಿದರು ಎಂದು ಕಿಡಿಕಾರಿದರು.