ಮೈಸೂರು : ವಿಧಾನಸಭಾ ಚುನಾವಣೆ ಪ್ರಚಾರ ಅಂಗವಾಗಿ ಹಳೇ ಮೈಸೂರು ಪ್ರಾಂತಗಳಲ್ಲಿ ಪ್ರವಾಸ ನಡೆಸಿದ ಅಧ್ಯಕ್ಷ ರಾಹುಲ್‌ ಗಾಂಧಿ, ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ನೆಲವಾದ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಜನಾಶೀರ್ವಾದ ಸಮಾರಂಭಕ್ಕೆ ಜನಸಾಗರವೇ ಹರಿದು ಬಂದಿದ್ದು ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು.

ಕೇಂದ್ರ ಸರ್ಕಾರ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದ ಅವರು, ನೋಟು ಅಮಾನ್ಯ, ಕಪ್ಪುಹಣ ವಾಪಸ್‌, ವಿದೇಶಕ್ಕೆ ಪರಾರಿಯಾಗಿರುವ ಬಂಡವಾಳಶಾಹಿಗಳು, ನಿರುದ್ಯೋಗ ಸಮಸ್ಯೆಗಳ ವಿಚಾರದಲ್ಲಿ ಮೋದಿ ವಿಫಲವಾಗಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದ್ದು ಮುಂದಿನ ಹತ್ತು ದಿನದಲ್ಲಿ ಸರ್ಕಾರ ಸ್ಥಿತಿ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ 2 ಕೋಟಿ ಉದ್ಯೋಗ ಭರವಸೆಯ ಪೈಕಿ ಕನಿಷ್ಠ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ. ಕಪ್ಪು ಹಣ ತಂದು ಜನರ ಖಾತೆಗೆ .15 ಲಕ್ಷ ವರ್ಗಾಯಿಸುತ್ತೇನೆ ಎಂದಿದ್ದ ಪ್ರಧಾನಿ ಮೋದಿ ಅವರು, ಕೇವಲ .15ನ್ನೂ ಹಾಕಿಲ್ಲ. ಬದಲಿಗೆ ಲಲಿತ್‌ಮೋದಿ, ನೀರವ್‌ ಮೋದಿ, ವಿಜಯ್‌ ಮಲ್ಯ ಸೇರಿದಂತೆ ಅನೇಕರು ವಿದೇಶಕ್ಕೆ ಪರಾರಿಯಾಗಲು ಅವಕಾಶ ಕಲ್ಪಿಸಿದರು. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಇಂತಹ ಅನೇಕರು ವಿದೇಶಕ್ಕೆ ರಫ್ತಾಗುತ್ತಾರೆ ಎಂದು ಅವರು ಕಟುವಾಗಿ ಟೀಕಿಸಿದರು.

ಚೀನಾ ಡೋಕ್ಲಾಮ್‌ನಲ್ಲಿ ಹೆಲಿಪ್ಯಾಡ್‌, ರಸ್ತೆ ನಿರ್ಮಿಸಿದೆ. ಈ ಬಗ್ಗೆ ಒಂದೂ ಮಾತನಾಡದ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರ ಜೊತೆ ಗುಜರಾತ್‌ನಲ್ಲಿ ಉಯ್ಯಾಲೆ ಆಡುತ್ತಾರೆ. ನೆರೆಯ ರಾಷ್ಟ್ರಗಳಾದ ಬರ್ಮಾ, ಶ್ರೀಲಂಕಾ, ಮಾಲ್ಡೀವ್, ನೇಪಾಳ ಮುಂತಾದ ರಾಷ್ಟ್ರಗಳು ಚೀನಾ ಜೊತೆ ಕೈಜೋಡಿಸಿವೆ. ಹೀಗೆ ದೇಶದ ಹಣ ಲೂಟಿ ಹೊಡೆದವರು ದೇಶ ಬಿಟ್ಟು ಹೋದರೂ, ನುಸುಳುಕೋರರು ದೇಶದ ಗಡಿ ದಾಟಿದರೂ ಈ ದೇಶದ ಕಾವಲುಗಾರ(ಮೋದಿ) ಮಾತ್ರ ನೋಡುತ್ತ ನಿಂತಿದ್ದಾರೆ ಎಂದು ಅವರು ಕಿಡಿಕಾರಿದರು.

ನಾವಿದ್ದಾಗ ಸಮಸ್ಯೆಯಿರಲಿಲ್ಲ: ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕವಾದಿಗಳ ಸಮಸ್ಯೆ ಇರಲಿಲ್ಲ. ಅಹಿಂಸೆ ಇರಲಿಲ್ಲ. ನಾವು ಉಗ್ರರ ಬೆನ್ನು ಮುರಿದಿದ್ದೆವು. ಆದರೆ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಒಂದು ಮಾತನ್ನೂ ಹಾಡುತ್ತಿಲ್ಲ ಎಂದರು.

ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಸಾಕಷ್ಟುಸಮಸ್ಯೆ ಸೃಷ್ಟಿಯಾಯಿತು. ಕೇಂದ್ರ ಸರ್ಕಾರವು ಸೃಢವಾಗಿದ್ದ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ. ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟವ್ಯಾಪಾರಿಗಳು ತಮ್ಮ ಅಂಗಡಿ ಬಾಗಿಲು ಮುಚ್ಚಬೇಕಾಗುತ್ತದೆ. ಆದರೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಮಗ ಜೈಷ್‌ ಮಾತ್ರ ಕೇವಲ 50 ಸಾವಿರ ಬಂಡವಾಳದಲ್ಲಿ 80 ಸಾವಿರ ಕೋಟಿ ಲಾಭ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ರೆಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಫ್ರಾನ್ಸ್‌ಗೆ ಟೆಂಡರ್‌ ನೀಡಿದ ಪ್ರಧಾನಿ ಮೋದಿ ಅವರು ತಮ್ಮ ಸ್ನೇಹಿತನಿಗೆ 40 ಸಾವಿರ ಕೋಟಿ ಕೊಡಿಸಿದ್ದಾರೆ. ನಾವು ಈ ವಿಮಾನ ತಯಾರಿಕೆಯನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ನೀಡಲು ಉದ್ದೇಶಿಸಿದ್ದೆವು ಎಂದು ಹೇಳಿದರು.

ಗುಜರಾತ್‌ ಖಾಸಗೀಕರಣ: ಈ ವೇಳೆ ಗುಜರಾತ್‌ ಆಡಳಿತವನ್ನೂ ತರಾಟೆಗೆ ತೆಗೆದುಕೊಂಡ ಅವರು, ಶೇ.90ರಷ್ಟುಶಿಕ್ಷಣ ಸಂಸ್ಥೆಗಳು ಖಾಸಗೀಕರಣವಾಗಿವೆ. ಟಾಟಾ ಕಂಪನಿಗೆ ನ್ಯಾನೋ ಕಾರು ತಯಾರಿಸಲು ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ 35 ಸಾವಿರ ಕೋಟಿ ಸಾಲ ಕೊಟ್ಟಿತ್ತು. ಆದರೆ ಇಂದಿಗೂ ನ್ಯಾನೋ ಕಾರು ನೋಡಲು ಸಿಗುವುದಿಲ್ಲ. ಅಂದರೆ ಬಿಜೆಪಿ ಸರ್ಕಾರ ಜನರ ಹಣವನ್ನು ಬಂಡವಾಳಶಾಹಿಗಳಿಗೆ ನೀಡುತ್ತದೆ. ಕಾಂಗ್ರೆಸ್‌ ಸರ್ಕಾರ ನಿಮ್ಮ ಹಣವನ್ನು ನಿಮಗೆ ನೀಡುತ್ತದೆ ಎಂದು ಅವರು ಹೇಳಿದರು.