ಜೈ ಶಾ ಭ್ರಷ್ಟಾಚಾರದ ಬಗ್ಗೆ ಅಮಿತ್‌ ಶಾ ಬಾಯ್ಬಿಡಲಿ : ರಾಹುಲ್ ಕಿಡಿ

Rahul Gandhi slams Amith Shah
Highlights

ಹೈದರಾಬಾದ್‌-ಕರ್ನಾಟಕ ಪ್ರವಾಸ ಆರಂಭಿಸಿದ ಮೊದಲ ದಿನದಿಂದಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ಪ್ರವಾಸದ ಮೂರನೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‌ ಶಾ ಅವರನ್ನು ಟಾರ್ಗೆಟ್‌ ಮಾಡಿಕೊಂಡರು.

ದೇವದುರ್ಗ : ಹೈದರಾಬಾದ್‌-ಕರ್ನಾಟಕ ಪ್ರವಾಸ ಆರಂಭಿಸಿದ ಮೊದಲ ದಿನದಿಂದಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ಪ್ರವಾಸದ ಮೂರನೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‌ ಶಾ ಅವರನ್ನು ಟಾರ್ಗೆಟ್‌ ಮಾಡಿಕೊಂಡರು. ‘ಕಾಂಗ್ರೆಸ್‌ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು ಶಾ ಅವರು ತಮ್ಮ ಪುತ್ರ ಜೈ ಶಾ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕು. 50 ಸಾವಿರ ರು. ಬಂಡವಾಳ ಹೂಡಿ 80 ಕೋಟಿ ರು. ಆದಾಯ ಹೇಗೆ ಬಂತು ಎಂಬುದನ್ನು ನರೇಂದ್ರ ಮೋದಿ ವಿವರಿಸಬೇಕು’ ಎಂದು ಆಗ್ರಹಿಸಿದರು.

ಜನಾಶೀರ್ವಾದ ಯಾತ್ರೆಯ ಮೂರನೇ ದಿನವಾದ ಸೋಮವಾರ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಲು ಮುಂದಾಗುತ್ತಾರೆ. ಇದಕ್ಕೂ ಮುನ್ನ ಅವರು, ತಮ್ಮ ಆಪ್ತ ಅಮಿತ್‌ ಶಾ ಪುತ್ರನ ಭ್ರಷ್ಟಾಚಾರದ ಬಗ್ಗೆ ದೇಶದ ಜನರಿಗೆ ಸ್ಪಷ್ಟನೆ ನೀಡಬೇಕು. ಕೇವಲ 50 ಸಾವಿರ ಹೂಡಿ 80 ಕೋಟಿ ರು. ಆದಾಯ ಗಳಿಸುವ ಜೈ ಶಾ ಅವರು ಸ್ಟಾರ್ಟ್‌ಅಪ್‌ ಕಂಪೆನಿ ಆರಂಭಿಸುವುದು ಹೇಗೆ ಎಂಬುದನ್ನು ಜನತೆಗೆ ವಿವರಿಸಬೇಕು’ ಎಂದು ಹೇಳಿದರು.

‘ರಾಜ್ಯದ ಕಾಂಗ್ರೆಸ್‌ ಸರ್ಕಾರದ ಕಳೆದ 5 ವರ್ಷದಲ್ಲಿ ಒಂದೂ ಹಗರಣದಲ್ಲಿ ಶಾಮೀಲಾಗಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ನಿಮ್ಮ ಪಕ್ಕದಲ್ಲಿ ಕುಳಿತಿದ್ದ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಯಡಿಯೂರಪ್ಪ, ಜತೆಗೆ ಕಂಪನಿ ನೀಡಿದ ನಾಲ್ಕು ಮಂದಿ ಸಚಿವರು, ಭ್ರಷ್ಟಾಚಾರದ ಆರೋಪದ ಮೇಲೆ ರಾಜಿನಾಮೆ ನೀಡಿದ 11 ಮಂದಿ ಸಚಿವರು ನೆನಪಿಸಿಕೊಳ್ಳಿ’ ಎಂದು ಮೋದಿಗೆ ಸಲಹೆ ನೀಡಿದರು.

ಅಲ್ಲದೆ, ಸಿದ್ದರಾಮಯ್ಯ ಸರ್ಕಾರದ ಮಾದರಿಯಲ್ಲಿ ದೇಶಾದ್ಯಂತ ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್‌ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ನೀಡಿರುವ ಮಾದರಿಯ ಭತ್ಯೆಯನ್ನು ಇಡೀ ದೇಶಕ್ಕೆ ಅನ್ವಯ ಮಾಡಿ ಎಂದು ಆಗ್ರಹಿಸಿದರು.

ಚೀನಾಗೆ ಹೋಲಿಸಿ ಮೋದಿಗೆ ಟೀಕೆ: ‘ನರೇಂದ್ರ ಮೋದಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಭರವಸೆ ನೀಡಿದ್ದರು. ಬಳಿಕ ಪ್ರಧಾನಮಂತ್ರಿ ನರೇಂದ್ರ ಮೇಕ್‌ ಇನ್‌ ಇಂಡಿಯಾ ಎನ್ನುತ್ತಿದ್ದಾರೆ. ಆದರೆ, ಪ್ಯಾಂಟ್‌, ಶರ್ಟ್‌, ಕ್ಯಾಮೆರಾ, ಮೊಬೈಲ್‌, ವಾಚ್‌ ಏನು ಕೇಳಿದರೂ ಮೇಡ್‌ ಇನ್‌ ಚೀನಾ ಎಂದೇ ಇದೆ. ಚೀನಾ ದಿನವೊಂದಕ್ಕೆ 50 ಸಾವಿರ ಉದ್ಯೋಗ ಸೃಷ್ಟಿಸುತ್ತಿದೆ. ಆದರೆ, ಭಾರತ ಸರ್ಕಾರ ಇದೇ ಅವಧಿಯಲ್ಲಿ ಕೇವಲ 450 ಉದ್ಯೋಗ ಸೃಷ್ಟಿಮಾಡುವುದಾಗಿ ಹೇಳುತ್ತದೆ. ಇಷ್ಟೇನಾ ಮೋದಿ ಸರ್ಕಾರದ ಸಾಮರ್ಥ್ಯ’ ಎಂದು ಅವರು ಟೀಕಿಸಿದರು.

ಕರ್ನಾಟಕದಲ್ಲಿ ಶಾಂತಿ ಇದೆ, ಬೆಂಕಿ ಹಚ್ಚಬೇಡಿ- ರಾಹುಲ್‌: ನರೇಂದ್ರ ಮೋದಿ ಅವರು, ‘ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ’ ಎಂದು ಮಾಡಿದ ಆರೋಪವನ್ನು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ‘ಕರ್ನಾಟಕ ರಾಜ್ಯ ಶಾಂತಿ ಹಾಗೂ ನೆಮ್ಮದಿಯಿಂದ ಇದೆ. ಧರ್ಮ-ಧರ್ಮದ ನಡುವೆ ಬೆಂಕಿ ಹಚ್ಚುವ ಮೂಲಕ ಶಾಂತಿ ಕೆಡಿಸುವ ಕೆಲಸ ಮಾಡಬೇಡಿ’ ಎಂದರು.

ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವ ಬದಲು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನದ ಅವ್ಯವಸ್ಥೆ ಗಮನಿಸಿ. ಕರ್ನಾಟಕಕ್ಕೆ ಬಂದು ಪ್ರಚೋದನೆ ನೀಡಿ ಇಲ್ಲಿ ನೆಲಸಿರುವ ಶಾಂತಿ ಹಾಳು ಮಾಡಬೇಡಿ. ಕರ್ನಾಟಕ ಜನ ಬುದ್ಧಿವಂತರಿದ್ದಾರೆ. ಅವರಿಗೆ ತಮ್ಮ ನಾಡನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಗೊತ್ತಿದೆ ಎಂದರು.

ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಮುಂದಿನ ಬಾರಿ ಬರುವಾಗ ರಫೇಲ್‌ ಡೀಲ್‌, ಅಮಿತ್‌ ಶಾ ಪುತ್ರನ ಅವ್ಯವಹಾರದ ಬಗ್ಗೆ ಅವರು ಉತ್ತರಿಸಬೇಕು. ಜತೆಗೆ ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ದು ಏಕೆ ಸ್ಪಷ್ಟೀಕರಣ ಕೊಡಿ.

- ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

loader