ರಾಜ್ಯ ನಾಯಕರು ಈ ಬಾರಿ ಮಹಾಧಿವೇಶನ ನಗರದಲ್ಲೇ ನಡೆಯಲಿದೆ. ಬಹುತೇಕ ನಗರದ ಹೊರವಲಯ(ದೇವನಹಳ್ಳಿ ಬಳಿ)ದಲ್ಲಿ ಈ ಅಧಿವೇಶನ ನಡೆಯಲಿದೆ ಎಂದೇ ಹೇಳುತ್ತಾರೆ. ಒಂದು ವೇಳೆ ರಾಜ್ಯದಲ್ಲೇ ಮಹಾಧಿವೇಶನ ನಡೆದರೆ ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಪ್ರಕ್ರಿಯೆಗೆ ಉದ್ಯಾನ ನಗರಿ ಸಾಕ್ಷಿಯಾಗಲಿದೆ.

ಬೆಂಗಳೂರು(ಮೇ 02): ಎಪ್ಪತ್ತರ ದಶಕದಲ್ಲಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್‌ ಜನ್ಮ ನೀಡಿದ್ದ ಕರ್ನಾಟಕ, ಈಗ ಅವರ ಮೊಮ್ಮಗ ರಾಹುಲ್‌ ಗಾಂಧಿಗೂ ರಾಜಕೀಯವಾಗಿ ಹೊಸ ಚೈತನ್ಯ ನೀಡಲಿದೆಯೇ? ಇಂತಹದೊಂದು ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್‌ ಎಐಸಿಸಿ ಅಧಿವೇಶನವನ್ನು ರಾಜ್ಯದಲ್ಲೇ ಅದರಲ್ಲೂ ಬೆಂಗಳೂರಿನಲ್ಲೇ ನಡೆಸುವಂತೆ ಸಲ್ಲಿಸಿದ ಕೋರಿಕೆಯನ್ನು ಹೈಕಮಾಂಡ್‌ ಬಹುತೇಕ ಒಪ್ಪುವ ಸಾಧ್ಯತೆಯಿದೆ. ಹೀಗಾದಲ್ಲಿ, ಬೆಂಗಳೂರಿನಲ್ಲಿ ನಡೆಯುವ ಎಐಸಿಸಿ ಅಧಿವೇಶನದ ವೇಳೆಯೇ ರಾಹುಲ್‌ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷರಾಗಿ ಪಟ್ಟಾಭಿಷೇಕವಾಗಲಿದೆ ಎಂದು ಉನ್ನತ ಮೂಲಗಳು ಹೇಳುತ್ತವೆ.

ಈ ಬಾರಿ ಎಐಸಿಸಿ ಅಧ್ಯಕ್ಷರಿಗೂ ಚುನಾವಣೆ ನಡೆಯಬೇಕು ಎಂಬುದು ರಾಹುಲ್‌ ಬಯಕೆ. ಅದರಂತೆ ಎಐಸಿಸಿ ಮಹಾಧಿವೇಶನ ನಡೆಯುವಾಗಲೇ ಇಂತಹದೊಂದು ಪ್ರಕ್ರಿಯೆಯೂ ನಡೆಯಲಿದೆ. ಈ ಪ್ರಕ್ರಿಯೆ ನಡೆದರೆ ಸಹಜವಾಗಿಯೇ ರಾಹುಲ್‌ ಗಾಂಧಿ ಅವರು ಅಧ್ಯಕ್ಷರಾಗಿ ಚುನಾಯಿತರಾಗಲಿದ್ದಾರೆ ಎಂದು ರಾಜ್ಯದ ಪ್ರಮುಖ ನಾಯಕರೊಬ್ಬರು ಹೇಳುತ್ತಾರೆ.

ಆದರೆ, ಇನ್ನೂ ಎಐಸಿಸಿ ಮಹಾಧಿವೇಶನ ಬೆಂಗಳೂರಿನಲ್ಲಿ ನಡೆಸಲಾಗುವುದೇ ಎಂಬುದು ಖಚಿತವಾಗಿ ನಿರ್ಧಾರ​ವಾಗಿಲ್ಲ. ಈ ಬಗ್ಗೆ ರಾಜ್ಯದ ನಾಯಕರೊಂದಿಗೆ ಚರ್ಚಿ​ಸಲು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಎ.ಕೆ. ಆ್ಯಂಟನಿ ಈ ವಾರದಲ್ಲಿ ನಗರಕ್ಕೆ ಆಗಮಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಮಹಾಧಿವೇಶನ ಆಯೋ​ಜನೆಯ ಸಾಧ್ಯಾಸಾಧ್ಯತೆ ಕುರಿತು ಸಮಾಲೋಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

ರಾಜ್ಯ ನಾಯಕರ ಭೇಟಿಯ ನಂತರ ಆ್ಯಂಟನಿ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸುವರು. ಅನಂತರ ಮೂರು ದಿನಗಳ ಮಹಾಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವುದೋ ಅಥವಾ ಒಂದು ದಿನ ಪೂರ್ವ ಅಧಿವೇಶನ ನಡೆಸುವುದೋ ಎಂದು ತೀರ್ಮಾನವಾಗಲಿದೆ. ಆದರೆ, ರಾಜ್ಯ ನಾಯಕರು ಈ ಬಾರಿ ಮಹಾಧಿವೇಶನ ನಗರದಲ್ಲೇ ನಡೆಯಲಿದೆ. ಬಹುತೇಕ ನಗರದ ಹೊರವಲಯ(ದೇವನಹಳ್ಳಿ ಬಳಿ)ದಲ್ಲಿ ಈ ಅಧಿವೇಶನ ನಡೆಯಲಿದೆ ಎಂದೇ ಹೇಳುತ್ತಾರೆ. ಒಂದು ವೇಳೆ ರಾಜ್ಯದಲ್ಲೇ ಮಹಾಧಿವೇಶನ ನಡೆದರೆ ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಪ್ರಕ್ರಿಯೆಗೆ ಉದ್ಯಾನ ನಗರಿ ಸಾಕ್ಷಿಯಾಗಲಿದೆ.

ವೇಣುಗೋಪಾಲ್‌ ದೆಹಲಿಗೆ: ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ಹೊಸತಾಗಿ ನೇಮಕಗೊಂಡಿರುವ ಕೇರಳ ನಾಯಕ ಕೆ.ಸಿ. ವೇಣುಗೋಪಾಲ್‌ ಅವರು ಮಂಗಳವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ. ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಅನಂತರ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸುವರು ಎಂದು ಮೂಲಗಳು ತಿಳಿಸಿವೆ. ಆದರೆ, ವೇಣುಗೋಪಾಲ್‌ ನಗರಕ್ಕೆ ಯಾವಾಗ ಆಗಮಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇ 20ರಂದು ಕಾಂಗ್ರೆಸ್‌ ಕಾರ್ಯಕಾರಿಣಿ ನಗರದಲ್ಲಿ ನಡೆಯಲಿದ್ದು, ಆ ವೇಳೆಗೆ ಅವರು ನಗರಕ್ಕೆ ಆಗಮಿಸುವರೋ ಅಥವಾ ಅದಕ್ಕೂ ಮುನ್ನ ರಾಜ್ಯಕ್ಕೆ ಭೇಟಿ ನೀಡುವರೋ ಎಂಬುದು ಇನ್ನೊಂದೆರಡು ದಿನದಲ್ಲಿ ನಿರ್ಧಾರವಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಕನ್ನಡಪ್ರಭ ವಾರ್ತೆ
epaper.kannadaprabha.in