ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳು ತಯಾರಿಯಲ್ಲಿ ತೊಡಗಿಕೊಂಡಿದ್ದು ಗೆಲುವಿಗಾಗಿ ಹರಸಾಹಸ ಪಡುತ್ತಿವೆ. ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾರ್ವರ್ಡ್ ವಿವಿ ಪ್ರೊಫೆಸರ್ ಓರ್ವರನ್ನು ತಮ್ಮ ಕೋಚ್ ಆಯ್ಕೆ ಮಾಡಿಕೊಂಡಿದ್ದಾರೆ.
ನವದೆಹಲಿ: 2019ರ ಲೋಕಸಭಾ ಚುನಾವಣೆ ಗೆಲ್ಲಲು ನಾನಾ ತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದೀಗ ಪಕ್ಷದ ರಣತಂತ್ರ ರೂಪಿಸಲು, ಬ್ರಿಟನ್‌ನ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಟೀವ್ ಜಾರ್ಡಿಂಗ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಬ್ರಿಟನ್‌ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಈ ವೇಳೆ ಸ್ಟೀವ್ ಅವರನ್ನು ನೇರವಾಗಿ ಭೇಟಿ ಮಾಡಿ ಮಾತುಕತೆ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ ಈ ಹಿಂದೆ ಕೂಡಾ ರಾಹುಲ್ ಬ್ರಿಟನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಕಂಪನಿಯನ್ನೇ, ಭಾರತೀಯ ಮತದಾರರ ದತ್ತಾಂಶ ವಿಶ್ಲೇಷಣೆಗೆ ಬಳಸಿಕೊಂಡಿದ್ದರು. ಆದರೆ ಕಂಪನಿಯು ಫೇಸ್‌ಬುಕ್ ಮಾಹಿತಿಯನ್ನು ಕದ್ದಿದ್ದು ಬಹಿರಂಗವಾಗಿ ಭಾರೀ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ, ಇದೀಗ ರಣತಂತ್ರ ರೂಪಿಸುವ ಕಂಪನಿಯನ್ನು ಬದಲಿಸಲು ರಾಹುಲ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಯಾರೀ ಸ್ಟೀವ್?: ಸ್ಟೀವ್ ಹಾರ್ವರ್ಡ್ ವಿವಿಯಲ್ಲಿ ಪ್ರೊಫೆಸರ್ ಆಗಿದ್ದು, 1980ರಿಂದಲೂ ಚುನಾವಣಾ ರಣತಂತ್ರ ರೂಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಮೆರಿಕದಲ್ಲಿ ಕಳೆದ ಅಧ್ಯಕ್ಷೀಯ ಚುನಾವಣೆ ವೇಳೆ ಹಿಲರಿ ಕ್ಲಿಂಟನ್ ಪರ ಕಾರ್ಯತಂತ್ರ ರೂಪಿಸಿದ್ದು ಇವರೇ. ಇದಲ್ಲದೇ ಸ್ಪೇನ್‌ನ ಮಾಜಿ ಪ್ರಧಾನಿ ಮಾರಿಯಾನೋ ರಜೋಯ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪರವೂ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿಮಾಡಿಕೊಂಡು ಕಣಕ್ಕೆ ಇಳಿದಿದ್ದವು. ಆಗ ಸಮಾಜವಾದಿ ಪಕ್ಷದ ಪರವಾಗಿ ಇದೇ ಸ್ಟೀವ್ ಅವರ ತಂಡ ಕೆಲಸ ಮಾಡಿತ್ತು. ಆದರೆ ಭರ್ಜರಿ ಪ್ರಚಾರದ ಹೊರತಾಗಿಯೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಎದುರು ಎಸ್‌ಪಿ- ಕಾಂಗ್ರೆಸ್ ಮೈತ್ರಿಕೂಟ ಸೋಲನ್ನಪ್ಪಿತ್ತು.
