ನವದೆಹಲಿ[ಮೇ.26]: ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕಳಪೆ ಪ್ರದರ್ಶನ ತೋರಿದ ಹೊರತಾಗಿಯೂ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ನ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾದ ‘ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ’ (ಸಿಡಬ್ಲ್ಯುಸಿ) ಭರವಸೆ ವ್ಯಕ್ತಪಡಿಸಿದೆ. ಜೊತೆಗೆ ಕಳಪೆ ಸಾಧನೆಗೆ ನೊಂದು ರಾಜೀನಾಮೆ ನೀಡುವ ರಾಹುಲ್‌ರ ಇಂಗಿತವನ್ನು ತಿರಸ್ಕರಿಸಿದೆ. ಅಲ್ಲದೆ ಪಕ್ಷವನ್ನು ಎಲ್ಲ ಹಂತಗಳಲ್ಲೂ ಮರು ಸಂಘಟಿಸಲು ಅಧಿಕಾರ ನೀಡುವ ನಿರ್ಣಯ ಕೈಗೊಂಡಿದೆ.

ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಹುಲ್‌, ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗದೇ ಹೋದುದಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ಅಂಗೀಕರಿಸಿ, ನಮ್ಮ ಕುಟುಂಬದ ಹೊರತಾದ ಯಾರನ್ನಾದರೂ ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿ ಎಂದು ರಾಜೀನಾಮೆ ಪತ್ರವನ್ನು ಸಭೆಯ ಮುಂದೆ ಮಂಡಿಸಿದರು. ಜೊತೆಗೆ ರಾಜೀನಾಮೆ ಅಂಗೀಕಾರಕ್ಕೆ ಬಲವಾಗಿ ಪಟ್ಟು ಹಿಡಿದರು. ಆದರೆ ಈ ವೇಳೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಹಲವು ನಾಯಕರು ರಾಹುಲ್‌ ಮನವೊಲಿಸಿದರು ಎಂದು ಮೂಲಗಳು ತಿಳಿಸಿವೆ.

52 ಸದಸ್ಯರನ್ನು ಹೊಂದಿರುವ ಸಿಡಬ್ಲ್ಯುಸಿ ರಾಹುಲ್‌ ರಾಜೀನಾಮೆ ಬಯಕೆಯನ್ನು ಒಂದೇ ಸ್ವರದಲ್ಲಿ ತಿರಸ್ಕರಿಸಿತು. ಜತೆಗೆ ಅವರಿಗೆ ಪಕ್ಷದಲ್ಲಿ ಬದಲಾವಣೆಗಳನ್ನು ತರುವ ಅಧಿಕಾರ ನೀಡಲು ನಿರ್ಧರಿಸಿತು. ಸವಾಲಿನ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಂಡು, ಮಾರ್ಗದರ್ಶನ ಮಾಡುವಂತೆ ಕಾಂಗ್ರೆಸ್‌ ಅಧ್ಯಕ್ಷರನ್ನು ಕೋರಿತು. ಸಭೆ ಮುಗಿದ 45 ನಿಮಿಷಗಳ ತರುವಾಯ ಕಾಂಗ್ರೆಸ್ಸಿನ ನಾಯಕರು, ವಕ್ತಾರರು ಸುದ್ದಿಗೋಷ್ಠಿ ನಡೆಸಿದರು. ಆದರೆ ಈ ಗೋಷ್ಠಿಗೆ ರಾಹುಲ್‌ ಆಗಮಿಸದೇ ಸಭೆಯಿಂದ ನಿರ್ಗಮಿಸಿದರು. ಸಭೆ ಮುಕ್ತಾಯ ಹಾಗೂ ಸುದ್ದಿಗೋಷ್ಠಿ ಪ್ರಾರಂಭದ ನಡುವಿನ ಅವಧಿಯಲ್ಲೂ ರಾಹುಲ್‌ ರಾಜೀನಾಮೆಗೆ ಬಯಕೆ ತೋಡಿಕೊಂಡರು ಎನ್ನಲಾಗಿದೆ.

ರಾಹುಲ್‌ ರಾಜೀನಾಮೆಯನ್ನು ಅಂಗೀಕರಿಸಿದರೆ ಅವರ ಸ್ಥಾನಕ್ಕೆ ಯಾರು ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದೆ. ಆದ ಕಾರಣ ಸಿಡಬ್ಲ್ಯುಸಿ ಸಭೆ ಅವರ ರಾಜೀನಾಮೆ ತಿರಸ್ಕರಿಸಿತು ಎಂದು ಮೂಲಗಳು ತಿಳಿಸಿವೆ.

ಶನಿವಾರ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌, ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ಸಿನ ನಾಲ್ವರು ಮುಖ್ಯಮಂತ್ರಿಗಳಾದ ಪಂಜಾಬ್‌ನ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌, ರಾಜಸ್ಥಾನದ ಅಶೋಕ್‌ ಗೆಹ್ಲೋಟ್‌, ಛತ್ತೀಸ್‌ಗಢದ ಭೂಪೇಶ್‌ ಬಾಘೆಲ್‌ ಹಾಗೂ ಪುದುಚೇರಿಯ ನಾರಾಯಣಸ್ವಾಮಿ ಭಾಗವಹಿಸಿದ್ದರು. ಹಿರಿಯ ನಾಯಕರಾದ ಚಿದಂಬರಂ, ಎ.ಕೆ. ಆ್ಯಂಟನಿ, ಅಹಮದ್‌ ಪಟೇಲ್‌, ಗುಲಾಂ ನಬಿ ಆಜಾದ್‌, ಶೀಲಾ ದೀಕ್ಷಿತ್‌, ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ, ಆನಂದ ಶರ್ಮಾ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತಿತರರು ಪಾಲ್ಗೊಂಡಿದ್ದರು.

2014ರಲ್ಲಿ 44 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌, ಈ ಬಾರಿಯ ಚುನಾವಣೆಯಲ್ಲಿ ಕೇವಲ 52 ಸ್ಥಾನಗಳನ್ನು ಮಾತ್ರ ಗಳಿಸಿತ್ತು. ತನ್ಮೂಲಕ ಸತತ 2ನೇ ಅವಧಿಗೆ ಅಧಿಕೃತ ಪ್ರತಿಪಕ್ಷದ ಮಾನ್ಯತೆ ಗಳಿಸಲೂ ವಿಫಲವಾಗಿತ್ತು. 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾತೆ ತೆರೆಯಲು ವಿಫಲವಾಗಿತ್ತು.