ಪಣಜಿ (ಜ. 30):  ‘ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ರಹಸ್ಯ ಮಾಹಿತಿಗಳು ಮಾಜಿ ರಕ್ಷಣಾ ಸಚಿವ ಹಾಗೂ ಹಾಲಿ ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಅವರ ಬೆಡ್‌ರೂಂನಲ್ಲಿವೆ. ಅದನ್ನು ಇಟ್ಟುಕೊಂಡೇ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಟ ಆಡಿಸುತ್ತಿದ್ದಾರೆ’ ಎಂದು ಪದೇ ಪದೇ ಗಂಭೀರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಂಗಳವಾರ ಇಲ್ಲಿ ಪರ್ರಿಕರ್‌ ಅವರನ್ನು ದಿಢೀರನೇ ಭೇಟಿ ಮಾಡಿ ಅಚ್ಚರಿ ಮೂಡಿಸಿದರು.

ಖಾಸಗಿ ಭೇಟಿಗಾಗಿ ತಾಯಿ ಸೋನಿಯಾ ಗಾಂಧಿ ಜೊತೆ ಗೋವಾಕ್ಕೆ ಆಗಮಿಸಿರುವ ರಾಹುಲ್‌, ಮಂಗಳವಾರ ಬೆಳಗ್ಗೆ ಗೋವಾ ವಿಧಾನಸೌಧದ ಪ್ರಾಂಗಣದಲ್ಲಿರುವ ಸಿಎಂ ಕಚೇರಿಗೆ ತೆರಳಿ, ಅನಾರೋಗ್ಯದಿಂದ ಬಳಲುತ್ತಿರುವ ಮನೋಹರ್‌ ಪರ್ರಿಕರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಗೋವಾ ವಿಧಾನಸಭೆ ಅಧಿವೇಶನ ಮಂಗಳವಾರ ಆರಂಭವಾದ ಹಿನ್ನೆಲೆಯಲ್ಲಿ ಪರ್ರಿಕರ್‌ ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ್ದರು.

‘ಈ ವೇಳೆ ರಫೇಲ್‌ ಯುದ್ಧವಿಮಾನ ವಿವಾದದ ಬಗ್ಗೆ ಯಾವುದೇ ಮಾತುಕತೆ ನಡೆಯಲಿಲ್ಲ. ಮೊದಲು ರಾಹುಲ್‌ ಅವರು ಪರ್ರಿಕರ್‌ ಅವರ ಆರೋಗ್ಯ ವಿಚಾರಿಸಿದರು. ನಂತರ ‘ದಿಲ್ಲಿಯಲ್ಲಿ ಸಾಕಷ್ಟುವಾಯುಮಾಲಿನ್ಯ ಇದೆ. ಅದಕ್ಕೇ ಶುದ್ಧಗಾಳಿ ಇರುವ ಗೋವಾಗೆ ಬಂದೆ. ತಾಯಿ ಸೋನಿಯಾ ಗಾಂಧಿ ಕೂಡ ಕೆಲವು ದಿನಗಳ ಹಿಂದೆ ಬಂದಿದ್ದಾರೆ’ ಎಂದು ಹೇಳಿದರು. 5 ನಿಮಿಷ ಈ ಸೌಜನ್ಯದ ಭೇಟಿ ನಡೆಯಿತು’ ಎಂದು ಮೂಲಗಳು ಹೇಳಿವೆ.

ಬಳಿಕ ಅವರು ವಿಧಾನಸೌಧದ ಆವರಣದಲ್ಲಿ ಕಾಂಗ್ರೆಸ್‌ ಶಾಸಕರೊಂದಿಗೆ 10 ನಿಮಿಷ ಮಾತುಕತೆ ನಡೆಸಿ ತೆರಳಿದರು. ಈ ವೇಳೆ ಹೊರಗಡೆ ಕಾದು ನಿಂತಿದ ಪತ್ರಕರ್ತರು, ಭೇಟಿಯ ಕುರಿತು ಮಾಹಿತಿ ಪಡೆಯಲು ಯತ್ನ ನಡೆಸಿದರಾದರೂ, ತಡವಾಯಿತು ಎಂಬ ಕಾರಣ ನೀಡಿ, ರಾಹುಲ್‌ ಸ್ಥಳದಿಂದ ತೆರಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ವಿಧಾನಸಭೆಯ ವಿಪಕ್ಷ ನಾಯಕ ಕಾಂಗ್ರೆಸ್‌ನ ಚಂದ್ರಕಾತ್‌ ಕವಳೇಕರ್‌, ‘ಪರ್ರಿಕರ್‌ ಆರೋಗ್ಯ ವಿಚಾರಿಸಲು ರಾಹುಲ್‌ ಬಂದಿದ್ದರು. ಇದನ್ನು ಹೊರತುಪಡಿಸಿ ಮತ್ಯಾವುದೇ ವಿಷಯ ಉಭಯ ನಾಯಕರ ಭೇಟಿ ವೇಳೆ ಚರ್ಚಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ದಿಲ್ಲಿಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಪ್ರತಿಕ್ರಿಯಿಸಿ, ‘ರಫೇಲ್‌ ಕುರಿತ ಕಾಂಗ್ರೆಸ್‌ ನಿಲುವು ಈ ಭೇಟಿಯಿಂದ ಬದಲಾಗಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.