ರಾಹುಲ್‌ ಮಾನಸ ಸರೋವರ ಯಾತ್ರೆ : ಹೆಜ್ಜೆ ಲೆಕ್ಕವಿಟ್ಟ ಕಾಂಗ್ರೆಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Sep 2018, 12:40 PM IST
Rahul Gandhi Mansarovar Yatra Video Viral
Highlights

ರಾಹುಲ್‌ ಗಾಂಧಿ ಅವರು ಮಾನಸ ಸರೋವರ ಯಾತ್ರೆ ವೇಳೆ 13 ತಾಸಿನಲ್ಲಿ ಕಾಲ್ನಡಿಗೆಯ ಮೂಲಕ ಮಾನಸ ಸರೋವರದ 18562 ಅಡಿ ಎತ್ತರದ ಪರ್ವತ ಶ್ರೇಣಿಯೊಂದನ್ನು ಹತ್ತಿದ್ದಾಗಿ ಅವರಿಗೆ ಹತ್ತಿರದ ಮೂಲಗಳು ಹೇಳಿವೆ. ಇದೀಗ ಈ ಸಂಬಂಧ ವಿಡಿಯೋ ವೈರಲ್ ಆಗಿದೆ. 

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕೈಲಾಸ ಮಾನಸ ಸರೋವರ ಯಾತ್ರೆಯ ಫೋಟೋ ಹಾಗೂ ವಿಡಿಯೋಗಳು ಶುಕ್ರವಾರ ಬಿಡುಗಡೆಯಾಗಿದೆ. ರಾಹುಲ್‌ ಅವರು 13 ತಾಸಿನಲ್ಲಿ ಕಾಲ್ನಡಿಗೆಯ ಮೂಲಕ ಮಾನಸ ಸರೋವರದ 18562 ಅಡಿ ಎತ್ತರದ ಪರ್ವತ ಶ್ರೇಣಿಯೊಂದನ್ನು ಹತ್ತಿದ್ದಾಗಿ ಅವರಿಗೆ ಹತ್ತಿರದ ಮೂಲಗಳು ಹೇಳಿವೆ. ಇದೇ ವೇಳೆ, ‘ಶಿವನೇ ಪ್ರಪಂಚ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಸುಮಾರು 34 ಕಿ.ಮೀ. ಅಂತರವುಳ್ಳ ಈ ದೂರವನ್ನು ರಾಹುಲ್‌ ಅವರು ಇತರ ಯಾತ್ರಿಗಳಂತೆ ಕುದುರೆ ಮೇಲೆ ಕ್ರಮಿಸದೇ ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಈ ಗುಡ್ಡವು ಸಮುದ್ರ ಮಟ್ಟದಿಂದ 18562 ಅಡಿ ಎತ್ತರವಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ಬೆಳಗ್ಗೆ 7ಕ್ಕೆ ಚಾರಣ ಆರಂಭಿಸಿದ ರಾಹುಲ್‌ ಕ್ಯಾಂಪ್‌ ತಲುಪಿದಾಗ ರಾತ್ರಿ 8 ಗಂಟೆಯಾಗಿತ್ತು.

ಇದೇ ವೇಳೆ, ರಾಹುಲ್‌ ಅವರು ಇತರ ಯಾತ್ರಿಗಳೊಂದಿಗೆ ತೆಗೆಸಿಕೊಂಡ ಫೋಟೋಗಳು ಹಾಗೂ ವಿಡಿಯೋ ವೈರಲ್‌ ಆಗಿವೆ. ಹಲವು ಚಿತ್ರಗಳಲ್ಲಿ ರಾಹುಲ್‌ ಊರುಗೋಲು ಹಿಡಿದಿದ್ದು ಕಂಡುಬರುತ್ತದೆ. ಭಾರಿ ಚಳಿ ಇರುವ ಕಾರಣ ರಾಹುಲ್‌ ಸ್ವೆಟರ್‌, ಜೀನ್ಸ್‌, ಬೂಟು, ಜಾಕೆಟ್‌, ಗಾಗಲ್‌ ಧರಿಸಿದ್ದಾರೆ. ರಾಹುಲ್‌ ಅವರ ಯಾತ್ರೆ 15 ದಿನಗಳಾಗಿದ್ದು, ಈಗ 5 ದಿನದ ಯಾತ್ರೆ ಪೂರೈಸಿದ್ದಾರೆ. ವಿಶೇಷವೆಂದರೆ ರಾಹುಲ್‌ ಇರುವ ಯಾವುದೇ ಫೋಟೋಗಳನ್ನು ಸ್ವತಃ ಅವರೇ ಪ್ರಕಟಿಸಿಲ್ಲ. ಬದಲಾಗಿ ಅವರೊಂದಿಗೆ ಫೋಟೋ ತೆಗೆಸಿಕೊಂಡ ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ನಕಲಿ ಫೋಟೋ: ಬಿಜೆಪಿ ಶಂಕೆ

ಈ ನಡುವೆ, ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟ್ವೀಟ್‌ ಮಾಡಿ, ‘ರಾಹುಲ್‌ ಅವರ ಒಂದು ಛಾಯಾಚಿತ್ರದಲ್ಲಿ ಅವರು ಹಿಡಿದುಕೊಂಡ ಊರುಗೋಲಿನ ನೆರಳು ಗೋಚರಿಸಲ್ಲ. ಅವರು ಮಾನಸ ಸರೋವರಕ್ಕೆ ಹೋಗಿದ್ದು ಫೋಟೋಶಾಪ್‌ ಕರಾಮತ್ತು’ ಎಂದು ರಾಹುಲ್‌ ಯಾತ್ರೆಯ ಅಸಲಿತನವನ್ನೇ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್‌ ಪಕ್ಷ ತಿರುಗೇಟು ನೀಡಿದ್ದು, ಯಾತ್ರೆಯಲ್ಲಿ ರಾಹುಲ್‌ ಕ್ರಮಿಸಿದ ದೂರ, ಕ್ರಮಿಸಲು ತೆಗೆದುಕೊಂಡ ಸಮಯದ ಬಗ್ಗೆ ಟ್ವೀಟ್‌ ಮಾಡಿದೆ.

ರಾಹುಲ್‌ ಟ್ರೆಕ್ಕಿಂಗ್‌

ಕೈಲಾಸ ಮಾನಸ ಸರೋವರದ ಪರ್ವತ ಶ್ರೇಣಿಯ ಪರ್ವತವೊಂದನ್ನು ರಾಹುಲ್‌ ಏರಿದ ವಿವರವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ರಾಹುಲ್‌ ಇಟ್ಟಹೆಜ್ಜೆಗಳ ಸಂಖ್ಯೆ...46433 ಹೆಜ್ಜೆ

ಹತ್ತಿದ ಎತ್ತರವು ಇಷ್ಟುಅಂತಸ್ತುಗಳಿಗೆ ಸಮ...203 ಅಂತಸ್ತು

ಹತ್ತಿದ ಬೆಟ್ಟದ ದೂರ...34.31 ಕಿ.ಮೀ.

ಚಾರಣದಿಂದ ಇಷ್ಟುಕ್ಯಾಲೋರಿ ನಷ್ಟ.. 4466 ಕ್ಯಾಲೋರಿ

ಪರ್ವತ ಏರಲು ತೆಗೆದುಕೊಂಡ ಸಮಯ...13 ಗಂಟೆ

ಪರ್ವತ ಏರುವಾಗ ರಾಹುಲ್‌ ಎದೆಬಡಿತ..73 ಬಡಿತ ಪ್ರತಿ ನಿಮಿಷಕ್ಕೆ

ಸಾಮಾನ್ಯ ವೇಳೆಯಲ್ಲಿ ಮನುಷ್ಯನ ಎದೆಬಡಿತ...69 ಬಡಿತ ಪ್ರತಿ ನಿಮಿಷಕ್ಕೆ

 

loader