* ಸೋನಿಯಾ ನಿವಾಸದಲ್ಲಿ ನಿನ್ನೆ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ* ಅ.15ರೊಳಗೆ ಪಕ್ಷದ ಆಂತರಿಕ ಚುನಾವಣೆ ಪೂರ್ಣಗೊಳಿಸಲು ನಿರ್ಣಯ* ರಾಹುಲ್‌ ಪದೋನ್ನತಿ ಬಗ್ಗೆ ಕಾಂಗ್ರೆಸ್‌ ಅಧಿಕೃತ ಹೇಳಿಕೆ ಇಲ್ಲ* ಆದರೂ, ಸಭೆಯಲ್ಲಿ ಚರ್ಚೆಯಾದ ಬಗ್ಗೆ ಮೂಲಗಳಿಂದ ಮಾಹಿತಿ

ನವದೆಹಲಿ: ಕಾಂಗ್ರೆಸ್‌ ಪಾಳಯದಲ್ಲಿ ಕಳೆದೆರಡು ವರ್ಷಗಳಿಂದ ಬಹುಚರ್ಚಿತ ವಿಷಯವಾಗಿದ್ದ, ರಾಹುಲ್‌ ಗಾಂಧಿ ಅವರನ್ನು ಅಧ್ಯಕ್ಷ ಪಟ್ಟಕ್ಕೆ ಏರಿಸುವ ಪ್ರಕ್ರಿಯೆ ಇನ್ನು 4-5 ತಿಂಗಳಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಅ.15ರೊಳಗೆ ಪಕ್ಷದ ಆಂತರಿಕ ಚುನಾವಣೆ ಪೂರ್ಣಗೊಳಿಸಲು ಪಕ್ಷ ನಿರ್ಧರಿಸಿದ್ದು, ಅದಕ್ಕೂ ಮುನ್ನ ಅಧ್ಯಕ್ಷ ಹುದ್ದೆಗೆ ಸೋನಿಯಾ ಗಾಂಧಿ ರಾಜೀನಾಮೆ ನೀಡಲಿದ್ದಾರೆ. ಈ ಮೂಲಕ ಪುತ್ರನ ಪಟ್ಟಾಭಿಷೇಕಕ್ಕೆ ಸೋನಿಯಾ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ವಿಶೇಷವೆಂದರೆ ಇಂಥದ್ದೊಂದು ಪಟ್ಟಾಭಿಷೇಕದ ಕಾರ್ಯಕ್ರಮ ಬೆಂಗಳೂರಲ್ಲಿ ನಡೆದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಹೈಕಮಾಂಡ್‌, ಬೆಂಗಳೂರಿನಲ್ಲೇ ಪಕ್ಷದ ಮಹಾಧಿವೇಶನ ನಡೆಸುವ ಸಾಧ್ಯತೆ ಇದೆ. ಹೀಗಾದಲ್ಲಿ ಬೆಂಗಳೂರಿನಲ್ಲೇ ರಾಹುಲ್‌ ಗಾಂಧಿ ಅವರನ್ನು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡುವ ಸಾಧ್ಯತೆ ಇಲ್ಲದಿಲ್ಲ ಎನ್ನಲಾಗಿದೆ.

ಸಿಡಬ್ಲ್ಯೂಸಿ ಸಭೆ: ಮುಂಬರುವ ಅ.15ರೊಳಗೆ ಪಕ್ಷದ ಆಂತರಿಕ ಚುನಾವಣೆ ಮುಗಿಸಲು ಮಂಗಳವಾರ ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಪಕ್ಷದ ಸಂಘಟನೆ ಬಲಪಡಿಸುವಂತೆ ಮತ್ತು ಆಂತರಿಕ ಚುನಾವಣೆಗಳನ್ನು ವೇಗವಾಗಿ, ಪ್ರಾಮಾಣಿಕ ವಾಗಿ ಪೂರ್ಣಗೊಳಿಸುವಂತೆ ಸಭೆಯಲ್ಲಿ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕರೆ ನೀಡಿದ್ದಾರೆ.

ಸಂಘಟನಾತ್ಮಕ ಚುನಾವಣೆ ಪೂರ್ಣಗೊಳಿಸಲು ದಿನಗಳನ್ನು ನಿಗದಿಪಡಿಸಲಾಗಿದೆ. ಆದರೆ ರಾಹುಲ್ ಸ್ಥಾನ ಮೇಲ್ದರ್ಜೆಗೇರಿಸುವ ಕುರಿತಂತೆ ನಿರ್ದಿಷ್ಟ ಚರ್ಚೆಗಳಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರಾದರೂ, ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯ್ತು ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.

ಕಳೆದ ನವೆಂಬರ್'ನಲ್ಲಿ ನಡೆದಿದ್ದ ಸಿಡಬ್ಲ್ಯುಸಿ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ ಸೇರಿದಂತೆ ಹಿರಿಯ ನಾಯಕರೆಲ್ಲ ರಾಹುಲ್ ಗಾಂಧಿಯವರು ಪಕ್ಷದ ನೇತೃತ್ವ ವಹಿಸುವ ಕುರಿತು ಬಲವಾಗಿ ಪ್ರತಿಪಾದಿಸಿದ್ದರು. 2013ರ ಜೈಪುರ ಅಧಿವೇಶನದಲ್ಲಿ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಬಳಿಕ ಹಲವು ಬಾರಿ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಗೆ ಕೂರಿಸುವ ಯತ್ನ ನಡೆದಿತ್ತಾದರೂ, ಅದಕ್ಕೆ ಸ್ವತಃ ರಾಹುಲ್‌ ಒಲವು ತೋರಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಈ ಪ್ರಕ್ರಿಯೆ ಸತತವಾಗಿ ಮುಂದೂಡಲ್ಪಡುತ್ತಲೇ ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೋನಿಯಾ ಆರೋಗ್ಯ ಕ್ಷೀಣಿಸಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲು ರಾಹುಲ್‌ ಸಮ್ಮತಿಸಿದ್ದಾರೆ ಎನ್ನಲಾಗಿದೆ.

epaper.kannadaprabha.in