ನವದೆಹಲಿ :  ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಯಾವ ಕಾರಣಕ್ಕೂ ಬೀಳಲು ಬಿಡಬಾರದು, ಲೋಕಸಭಾ ಚುನಾವಣೆಯವರೆಗಾದರೂ ಮೈತ್ರಿ ಸರ್ಕಾರ ಬಾಳಿಕೆ ಬರಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. 

ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಉದ್ದೇಶದಿಂದ ತಮ್ಮನ್ನು ಭೇಟಿಯಾದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ರಾಹುಲ್ ಗಾಂಧಿ ಈ ನಿರ್ದೇಶನ ನೀಡಿದ್ದಾರೆ. ಸರ್ಕಾರ ಉರುಳಿಸಲು ಬಿಜೆಪಿ ನಾನಾ ತಂತ್ರಗಳನ್ನು ಮಾಡಬಹುದು. ‘ಅಪರೇಷನ್ ಕಮಲ’ಕ್ಕೂ ಮುಂದಾಗಬಹುದು. ಆದರೆ ಕಾಂಗ್ರೆಸ್ ನ ಶಾಸಕರು ಇದಕ್ಕೆ ಬಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಾಯಕರಾದ ನಿಮ್ಮ ಮೇಲಿದೆ. ನೀವು ಕಾಂಗ್ರೆಸ್‌ನ ಎಲ್ಲ ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. 

ರ್ಕಾರದ ಮಟ್ಟದಲ್ಲಿ ಶಾಸಕರ ಕೆಲಸಗಳು ಆಗುವಂತೆ ನೋಡಿಕೊಳ್ಳಬೇಕು ಎಂದು ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. ಬೆಳಗಾವಿ ಬಂಡಾಯ ಸೇರಿದಂತೆ ಕೆಲ ವಿದ್ಯಮಾನಗಳನ್ನು ಇನ್ನಷ್ಟು ಸೂಕ್ಷ್ಮವಾಗಿ ನಿಭಾಯಿಸಬಹುದಿತ್ತು. ಬಂಡಾಯದ ಕಿಡಿ ಹುಟ್ಟಿಕೊಳ್ಳುತ್ತಲೇ ಅದನ್ನು ಆರಿಸುವ ಪ್ರಾಮಾಣಿಕ ಪ್ರಯತ್ನ ರಾಜ್ಯದ ನಾಯಕರುಗಳಿಂದ ಆಗಿಲ್ಲ. ಆದರೆ ಇನ್ನು ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ. 

ಶಾಸಕರಲ್ಲಿ ಅಸಮಾಧಾನ, ಅತೃಪ್ತಿ ಇದೆ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಬೇಕು ಎಂದು ರಾಜ್ಯ ನಾಯಕರಿಗೆ ರಾಹುಲ್ ಸೂಚಿಸಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕದ ಬಗ್ಗೆಯೂ ರಾಜ್ಯ ನಾಯಕರು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿದ್ದಾರೆ. ಆದರೆ ಪ್ರಸಕ್ತ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕದ ಕಸರತ್ತಿಗೆ ಕೈ ಹಾಕುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದರು ಎನ್ನಲಾಗಿದೆ.

ರಾಹುಲ್ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಬಗ್ಗೆ ಸಮಾಲೋಚನೆ ನಡೆದರೂ ಅಂತಿಮ ತೀರ್ಮಾನವನ್ನು ಹೈಕಮಾಂಡ್‌ಗೆ ನೀಡಲಾಗಿದೆ. ರಾಜ್ಯ ನಾಯಕರುಗಳುಪ್ರದೇಶವಾರು, ಜಾತಿವಾರು ಲೆಕ್ಕಾಚಾರಗಳನ್ನು ರಾಹುಲ್ ಗಾಂಧಿ ಮುಂದಿ ಟ್ಟಿದ್ದಾರೆ.

ಪರಮೇಶ್ವರ್ ಅವರು ನಿವೇದಿತ್ ಆಳ್ವ ಮತ್ತು ಎಂ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಅವರು ರಾಮಚಂದ್ರಪ್ಪ, ವಿ.ಆರ್.ಸುದರ್ಶನ್, ರವಿಶಂಕರ್ ಶೆಟ್ಟಿ ಅವರ ಹೆಸರನ್ನು ರಾಹುಲ್ ಗಾಂಧಿ ಅವರ ಮುಂದಿಟ್ಟಿದ್ದಾರೆ. ದಿನೇಶ್ ಗುಂಡೂರಾವ್ ಕೂಡ ತಮ್ಮದೇ ಒಂದು ಪಟ್ಟಿಯನ್ನು ರಾಹುಲ್ ಗಾಂಧಿ ಅವರಿಗೆ ತಲುಪಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ವಿಧಾನ ಸಭೆಯಿಂದ ಆಯ್ಕೆಯಾಗುವ ಮೂರು ಸ್ಥಾನಗಳಿಗೆ ತೆರವಾಗಿರುವ ಸಮುದಾಯದ ನಾಯಕರುಗಳಿಗೆಯೇ ಮಣೆ ಹಾಕುವ ಬಗ್ಗೆಯೂ ಚರ್ಚೆ ನಡೆದಿದೆ.

ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಮಹಿಳಾ ಕೋಟಾದಲ್ಲಿ ಒಂದೊಂದು ಸ್ಥಾನ ಹಂಚಿಕೆ ಆಗುವುದು ಬಹುತೇಕ ಖಚಿತವಾಗಿದೆ. ವಿಧಾನ ಪರಿಷತ್ತಿನ ನಾಮನಿರ್ದೇಶನ ವಿಭಾಗದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ. ರಾಜ್ಯದ ನಾಯಕರು ನೀಡಿರುವ ಪಟ್ಟಿಯ ಬಗ್ಗೆ ಇನ್ನೊಮ್ಮೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಚರ್ಚಿಸಿ ರಾಹುಲ್ ಗಾಂಧಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.