Asianet Suvarna News Asianet Suvarna News

ಕಾಂಗ್ರೆಸ್‌ಗೆ ರಾಹುಲ್ ವಿದಾಯ; ಗಮನ ಸೆಳೆದ ಭಾವನಾತ್ಮಕ ಪತ್ರ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ | ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿಯದ ರಾಹುಲ್ | ರಾಜಿನಾಮೆ ವಾಪಸ್ ಪಡೆಯಲು ನಕಾರ 

Rahul Gandhi has quit reason behind his resigns as a congress president
Author
Bengaluru, First Published Jul 4, 2019, 10:24 AM IST
  • Facebook
  • Twitter
  • Whatsapp

ಸುಂದರ ದೇಶ ಭಾರತದ ಮೌಲ್ಯಗಳು ಮತ್ತು ಆದರ್ಶಗಳಿಗಾಗಿ ಕಾರ‍್ಯನಿರ್ವಹಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಸೇವೆ ಸಲ್ಲಿಸಿರುವುದು ನನಗೆ ಸಿಕ್ಕ ಅತ್ಯುತ್ತಮ ಗೌರವ. ಅದಕ್ಕಾಗಿ ಇಡೀ ದೇಶಕ್ಕೆ ನಾನು ಕೃತಜ್ಞ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿ, 2019ರ ಚುನಾವಣೆಯಲ್ಲಾದ ಸೋಲಿಗೆ ನಾನೇ ಜವಾಬ್ದಾರ. ಪಕ್ಷದ ಭವಿಷ್ಯಕ್ಕಾಗಿ ಈ ಹೊಣೆಗಾರಿಕೆಯನ್ನು ನಾನೇ ಹೊರುತ್ತಿದ್ದೇನೆ. ಇದೇ ಕಾರಣಕ್ಕಾಗಿ ನಾನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.

ಪಕ್ಷದ ಪುನರುಜ್ಜೀವನಕ್ಕೆ ಇಂಥ ಕಠಿಣ ನಿರ್ಧಾರಗಳು ಅನಿವಾರ್ಯ. ಹಲವರು 2019ರ ಸೋಲಿಗೆ ತಮ್ಮನ್ನು ಹೊಣೆಗಾರರನ್ನಾಗಿಸಿಕೊಂಡಿದ್ದಾರೆ. ಆದರೆ ಪಕ್ಷದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯನ್ನು ಕಡೆಗಣಿಸಿ, ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ.

ರಾಹುಲ್ ರಾಜೀನಾಮೆ; ಕಾಂಗ್ರೆಸ್‌ಗೆ ಸಂಕಷ್ಟ

ಮುಂದಿನ ಕಾಂಗ್ರೆಸ್‌ ಅಧ್ಯಕ್ಷರನ್ನು ನಾನೇ ನೇಮಿಸುವಂತೆ ಹಲವು ಸಹೋದ್ಯೋಗಿಗಳು ಸಲಹೆ ನೀಡಿದ್ದರು. ಪಕ್ಷವನ್ನು ಮುನ್ನಡೆಸುವ ದೃಷ್ಟಿಯಿಂದ ಇದು ಮುಖ್ಯ ಕೂಡ. ಆದರೆ ಆ ವ್ಯಕ್ತಿಯನ್ನು ನಾನು ಆಯ್ಕೆ ಮಾಡುವುದು ಸರಿಯಲ್ಲ. ನಮ್ಮ ಪಕ್ಷಕ್ಕೆ ಸುದೀರ್ಘ ಇತಿಹಾಸ, ಪರಂಪರೆ ಮತ್ತು ಘನತೆ ಇದೆ. ಅದಕ್ಕೆ ನಾನು ಗೌರವ ಕೊಡುತ್ತೇನೆ. ಹಾಗಾಗಿ ಪಕ್ಷವನ್ನು ಧೈರ್ಯದಿಂದ, ಪ್ರೀತಿಯಿಂದ ಮತ್ತು ನಿಷ್ಠೆಯಿಂದ ಯಾರು ಮುನ್ನಡೆಸಬಲ್ಲರು ಎಂಬ ಬಗ್ಗೆ ಪಕ್ಷವು ಅತ್ಯುತ್ತಮ ನಿರ್ಧಾರ ಕೈಗೊಳ್ಳಲಿದೆ ಎಂಬ ನಂಬಿಕೆ ಇದೆ.

ಬಿಜೆಪಿ ಬಗ್ಗೆ ನನಗೆ ದ್ವೇಷವಿಲ್ಲ

ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯ ಸಹೋದ್ಯೋಗಿಗಳಿಗೆ ಒಂದು ಸಲಹೆ ನೀಡಿದೆ. ನೂತನ ಅಧ್ಯಕ್ಷರನ್ನು ಹುಡುಕಲೆಂದೇ ಒಂದು ಟೀಮ್‌ ರಚಿಸಲು ಹೇಳಿದ್ದೆ. ಅದಕ್ಕೆ ನಾನು ಕೂಡ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದೆ. ರಾಜಕೀಯ ಅಧಿಕಾರಕ್ಕಾಗಿನ ನನ್ನ ಹೋರಾಟ ಎಂದೂ ಸರಳವಾಗಿರಲಿಲ್ಲ.

ಬಿಜೆಪಿ ಬಗ್ಗೆ ನನಗೆ ಯಾವ ದ್ವೇಷ ಅಥವಾ ಸಿಟ್ಟೂ ಇಲ್ಲ. ಆದರೆ ನನ್ನ ದೇಹದ ಪ್ರತಿ ಕೋಶವೂ ಭಾರತದ ಬಗ್ಗೆ ಅವರಿಗಿರುವ ಕಲ್ಪನೆಯನ್ನು ಹುಟ್ಟಿನಿಂದಲೇ ವಿರೋಧಿಸುತ್ತಿವೆ. ಈ ಪ್ರತಿರೋಧಕ್ಕೆ ಕಾರಣ ಭಾರತೀಯತೆ ನನ್ನನ್ನು ಸಂಪೂರ್ಣವಾಗಿ ವ್ಯಾಪಿಸಿರುವುದು. ಹಾಗಾಗಿ ಎಂದೆಂದಿಗೂ ಅವರೊಂದಿಗೆ ನೇರ ಸಂಘರ್ಷ ಇದ್ದಿದ್ದೇ. ಇದೇನು ಹೊಸತಲ್ಲ; ಸಾವಿರಾರು ವರ್ಷಗಳ ನಮ್ಮ ನೆಲದ ಮಣ್ಣಿನಲ್ಲೇ ಅಂಥದ್ದೊಂದು ಗುಣವಿದೆ. ಅವರು ಭಿನ್ನತೆಯನ್ನು ಗುರುತಿಸುತ್ತಾರೆ, ನಾನು ಸಾಮ್ಯತೆಯನ್ನು ಗುರುತಿಸುತ್ತೇನೆ.

ಅವರು ದ್ವೇಷವನ್ನೇ ಹುಡುಕುತ್ತಾರೆ, ನಾನು ಪ್ರೀತಿಯನ್ನು ಹುಡುಕುತ್ತೇನೆ. ಅವರು ಯಾವುದಕ್ಕೆ ಭಯಪಡುತ್ತಾರೋ ಅದನ್ನು ನಾನು ಅಪ್ಪಿಕೊಳ್ಳುತ್ತೇನೆ. ಈ ಸಹಾನುಭೂತಿ ಸಿದ್ಧಾಂತವು ಲಕ್ಷಾಂತರ ಹೃದಯಗಳಲ್ಲಿ ಮತ್ತು ನನ್ನನ್ನು ಇಷ್ಟಪಡುವ ಲಕ್ಷಾಂತರ ಜನರಲ್ಲಿ ವ್ಯಾಪಿಸಿದೆ. ಇದು ಭಾರತದ ನಿಜವಾದ ಸಿದ್ಧಾಂತ. ಇದನ್ನು ಭಾವೋದ್ವೇಗದಿಂದ ಈಗಲೂ ಸಮರ್ಥಿಸಿಕೊಳ್ಳುತ್ತೇವೆ.

ಕಾಂಗ್ರೆಸ್‌ನ ವಿಧೇಯ ಪುತ್ರ ನಾನು

ನಮ್ಮ ದೇಶ ಮತ್ತು ಸಂವಿಧಾನದ ಮೇಲಾಗುತ್ತಿರುವ ದಾಳಿಗಳು ದೇಶದ ಮೂಲಭೂತ ವಿನ್ಯಾಸವನ್ನೇ ಹಾಳುಗೆಡವುತ್ತಿವೆ. ಯಾವುದೇ ಕಾರಣಕ್ಕೂ ಇದರ ವಿರುದ್ಧದ ನನ್ನ ಹೋರಾಟ ನಿಲ್ಲುವುದಿಲ್ಲ. ಕಾಂಗ್ರೆಸ್‌ ಪಕ್ಷದ ವಿಧೇಯ ಸೈನಿಕ ನಾನು, ಪೂಜ್ಯ ಭಾರತದ ಮಗ ನಾನು. ನನ್ನ ಕೊನೆಯ ಉಸಿರಿರುವವರೆಗೂ ನಾನು ಆಕೆಯ ಸೇವೆ ಮಾಡುತ್ತೇನೆ ಮತ್ತು ಆಕೆಯನ್ನು ರಕ್ಷಿಸುತ್ತೇನೆ.

ನಾವು ಗಂಭೀರ ಮತ್ತು ಘನತೆಯುಳ್ಳ ಚುನಾವಣೆಯಲ್ಲಿ ಸ್ಪರ್ಧಿಸಿ, ಹೋರಾಡಿದೆವು. ಸಹೋದರತ್ವ, ಸಹನೆ ಮತ್ತು ಭಾರತದ ಪ್ರತಿ ನಾಗರಿಕರಿಗೆ, ಪ್ರತಿ ಧರ್ಮಕ್ಕೆ, ಪ್ರತಿ ಸಮುದಾಯಗಳಿಗೆ ಸಮಾನ ಗೌರವ ಲಭಿಸಬೇಕು ಎಂಬುದು ನಮ್ಮ ಪ್ರಚಾರದ ಪ್ರಮುಖ ವಿಷಯವಾಗಿತ್ತು.

ವೈಯಕ್ತಿಕವಾಗಿ ಪ್ರಧಾನಿ, ಆರ್‌ಎಸ್‌ಎಸ್‌ ಮತ್ತು ಅವರ ಸಂಸ್ಥೆಗಳೊಟ್ಟಿಗೆ ನಾನು ಸಂಘರ್ಷಕ್ಕಿಳಿದಿದ್ದೆ. ಕಾರಣ ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಭಾರತವನ್ನು ನಿರ್ಮಿಸಿದ ಆದರ್ಶಗಳನ್ನು ಕಾಪಿಡಲು ಸದಾ ಹೋರಾಡುತ್ತೇನೆ.

ಈ ಹೋರಾಟದಲ್ಲಿ ಒಮ್ಮೆ ನಾನು ಒಬ್ಬಂಟಿಯಾಗಿದ್ದೆ. ಆ ಬಗ್ಗೆ ಹೆಮ್ಮೆ ಇದೆ. ನಮ್ಮ ಕಾರ‍್ಯಕರ್ತರು, ಪಕ್ಷದ ಸದಸ್ಯರ ಚೈತನ್ಯ, ಅವರ ಸಮರ್ಪಣಾ ಮನೋಭಾವ ಹಾಗೂ ಪ್ರೀತಿ ಮತ್ತು ಸಭ್ಯತೆಯ ಪಾಠ ಹೇಳಿಕೊಟ್ಟಜನರಿಂದ ನಾನು ತುಂಬಾ ಕಲಿತಿದ್ದೇನೆ.

ನಮ್ಮ ಪ್ರಜಾಪ್ರಭುತ್ವ ದುರ್ಬಲವಾಗಿದೆ

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕೆಂದರೆ ದೇಶದ ಸಂಸ್ಥೆಗಳು ತಟಸ್ಥವಾಗಿರಬೇಕು. ಮುಕ್ತ ಪತ್ರಿಕಾ ಸ್ವಾತಂತ್ರ್ಯ, ಸ್ವತಂತ್ರ ನ್ಯಾಯಾಂಗ ಹಾಗೂ ವಸ್ತುನಿಷ್ಠ ಮತ್ತು ಪಾರದರ್ಶಕ ಚುನಾವಣಾ ಆಯೋಗ ಇಲ್ಲದಿದ್ದಲ್ಲಿ ಚುನಾವಣೆಯೊಂದು ನ್ಯಾಯಸಮ್ಮತವಾಗಿರಲು ಸಾಧ್ಯವಿಲ್ಲ.

ಹಾಗೆಯೇ ರಾಜಕೀಯ ಪಕ್ಷವೊಂದು ಆರ್ಥಿಕ ಸಂಪನ್ಮೂಲ ಲಭ್ಯತೆಯಲ್ಲಿ ಸಂಪೂರ್ಣ ಏಕಸ್ವಾಮ್ಯ ಸಾಧಿಸಿದ್ದರೆ ಚುನಾವಣೆಯೊಂದು ಮುಕ್ತವಾಗಿರಲೂ ಸಾಧ್ಯವಿಲ್ಲ. 2019ರ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರ ವಿರುದ್ಧ ನಾವು ಹೋರಾಡಲಿಲ್ಲ. ಭಾರತದಲ್ಲಿರುವ ಯಂತ್ರಗಳ ವಿರುದ್ಧ ಸ್ಪರ್ಧಿಸಿದ್ದೆವು. ಪ್ರತಿಯೊಂದು ಸಂಸ್ಥೆಗಳನ್ನೂ ವಿರೋಧ ಪಕ್ಷದ ವಿರುದ್ಧ ತಿರುಗಿ ಬಿಡಲಾಗಿತ್ತು. ಒಂದು ಕಾಲದಲ್ಲಿ ಪಾಲಿಸಲೇಬೇಕಾದ ಸಾಂಸ್ಥಿಕ ತಟಸ್ಥತೆಯು ಈಗ ಭಾರತದಲ್ಲಿ ಸಂಪೂರ್ಣ ಮಾಯವಾಗಿದೆ ಎಂಬುದು ಸ್ಪಷ್ಟ.

ಆರ್‌ಎಸ್‌ಎಸ್‌ನ ಉದ್ದೇಶ, ನಮ್ಮ ದೇಶದ ಸಾಂಸ್ಥಿಕ ರಚನೆಯನ್ನು ಸೆರೆಹಿಡಿಯುವುದು. ಈಗ ಅದು ಸಂಪೂರ್ಣಗೊಂಡಿದೆ. ನಮ್ಮ ಪ್ರಜಾಪ್ರಭುತ್ವವು ದುರ್ಬಲವಾಗಿದೆ. ಚುನಾವಣೆಗಳು ಭಾರತದ ಭವಿಷ್ಯ ನಿರ್ಧರಿಸುವ ಬದಲಾಗಿ, ಕೇವಲ ಆಚರಣೆಗಳಾಗಿ ಬದಲಾಗುವ ನಿಜವಾದ ಆಪತ್ತು ಈಗ ಎದುರಾಗಿದೆ.

ಸತ್ಯದ ಬೆಳಕನ್ನು ಅಡಗಿಸಲು ಅಸಾಧ್ಯ

ಹೀಗೆ ಅಧಿಕಾರ ಕಬಳಿಸಿಕೊಳ್ಳುವ ಪ್ರವೃತ್ತಿಯಿಂದ ಮುಂದೆ ಭಾರತವು ಅಪಾರ ಪ್ರಮಾಣದ ಹಿಂಸೆ ಮತ್ತು ನೋವನ್ನು ಅನುಭವಿಸಬೇಕಾಗುತ್ತದೆ. ರೈತರು, ಯುವ ನಿರುದ್ಯೋಗಿಗಳು, ಮಹಿಳೆಯರು, ಬುಡಕಟ್ಟು ಜನಾಂಗಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಈಗಾಗಲೇ ಅತಿ ಹೆಚ್ಚು ನೋವು ಅನುಭವಿಸುತ್ತಿದ್ದಾರೆ.

ನಮ್ಮ ಆರ್ಥಿಕತೆಯ ಮೇಲಾಗುತ್ತಿರುವ ಪರಿಣಾಮವು ದೇಶದ ಗೌರವವನ್ನೇ ಹಾಳು ಮಾಡುತ್ತಿದೆ. ಪ್ರಧಾನಮಂತ್ರಿಗಳ ಗೆಲುವು ಅವರ ವಿರುದ್ಧದ ಭಷ್ಟಾಚಾರದ ಆರೋಪಗಳನ್ನು ನಿರಾಕರಿಸುವುದಿಲ್ಲ. ಅಪರಿಮಿತ ಹಣ ಮತ್ತು ಪ್ರೊಪಗ್ಯಾಂಡಾಗಳು ಸತ್ಯದ ಬೆಳಕನ್ನು ಅಡಗಿಸಲು ಸಾಧ್ಯವಿಲ್ಲ.

ನಮ್ಮ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು, ಮತ್ತೆ ಜೀವಂತಿಕೆ ನೀಡಲು ಭಾರತ ಒಂದಾಗಬೇಕು. ಈ ಪುನರುಜ್ಜೀವನಕ್ಕಿರುವ ಸಾಧನ ಕಾಂಗ್ರೆಸ್‌. ಈ ಮಹತ್ವದ ಕಾರ‍್ಯ ಸಾಧನೆಗೆ ಕಾಂಗ್ರೆಸ್‌ ಪಕ್ಷ ತನ್ನನ್ನು ತಾನು ಆಮೂಲಾಗ್ರವಾಗಿ ರೂಪಾಂತರಿಸಿಕೊಳ್ಳಬೇಕು. ಇಂದು ಬಿಜೆಪಿ ಭಾರತದ ಧ್ವನಿಯನ್ನು ಕ್ರಮಬದ್ಧವಾಗಿ ಹತ್ತಿಕ್ಕುತ್ತಿದೆ. ಈ ಧ್ವನಿಗಳ ರಕ್ಷಣೆ ಕಾಂಗ್ರೆಸ್‌ನ ಕರ್ತವ್ಯ. ಭಾರತಕ್ಕೆ ಎಂದಿಗೂ ಏಕ ಧ್ವನಿ ಎಲ್ಲ, ಇರುವುದೂ ಇಲ್ಲ. ಭಾರತ ಎಂದೆಂದಿಗೂ ಒಂದು ಸ್ವರಮೇಳ. ಭಾರತ ಮಾತೆಯ ನಿಜವಾದ ಅಸ್ತಿತ್ವವೇ ಅದು.

ಅಧಿಕಾರದ ವ್ಯಾಮೋಹ ಬಿಡದೆ ವಿರೋಧಿಗಳ ಮಣಿಸಲು ಸಾಧ್ಯವಿಲ್ಲ

ದೇಶ-ವಿದೇಶಗಳಲ್ಲಿದ್ದುಕೊಂಡು ಪತ್ರಗಳನ್ನು ರವಾನಿಸಿ, ಬೆಂಬಲಿಸಿದ ಸಾವಿರಾರು ಭಾರತೀಯರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಹಾಗಂತ ನಾನು ಕಾಂಗ್ರೆಸ್‌ನ ಆದರ್ಶಗಳ ಉಳಿವಿಗಾಗಿ ಶಕ್ತಿಮೀರಿ ಹೋರಾಡುತ್ತಲೇ ಇರುತ್ತೇನೆ. ಪಕ್ಷಕ್ಕೆ ಎಂದು ನನ್ನ ಸೇವೆ, ಸಲಹೆ ಅಗತ್ಯವಿರುತ್ತದೋ ಆಗೆಲ್ಲಾ ನಾನು ಲಭ್ಯವಿರುತ್ತೇನೆ.

ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಬೆಂಬಲಿಸುವ ಜನರೇ.. ಅದರಲ್ಲೂ ವಿಶೇಷವಾಗಿ ನಮ್ಮ ಪ್ರೀತಿಯ ಕಾರ‍್ಯಕರ್ತರೇ.. ನಮ್ಮ ಭವಿಷ್ಯದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಹಾಗೆಯೇ ನಿಮ್ಮ ಬಗ್ಗೆ ಅಪಾರ ಪ್ರೀತಿ ಇದೆ. ಶಕ್ತಿಯುತರು ಅಧಿಕಾರಕ್ಕೆ ಅಂಟಿಕೊಳ್ಳುತ್ತಾರೆ.

ಅದು ಭಾರತದಲ್ಲಿ ಹವ್ಯಾಸವಾಗಿಬಿಟ್ಟಿದೆ. ಆದರೆ ಅಧಿಕಾರದ ಆಸೆ ಬಿಡದೆ ವಿರೋಧಿಗಳನ್ನು ಮಣಿಸಲು ಸಾಧ್ಯವಿಲ್ಲ. ನಾನು ಹುಟ್ಟುತ್ತಲೇ ಕಾಂಗ್ರೆಸ್ಸಿಗ, ಇದು ನನ್ನೊಂದಿಗೆ ಅಚಲವಾಗಿಯೂ, ರಕ್ತಗತವಾಗಿಯೂ ಮತ್ತು ಜೀವನದುದ್ದಕ್ಕೂ ಶಾಶ್ವತವಾಗಿಯು ಉಳಿಯುತ್ತದೆ.

Follow Us:
Download App:
  • android
  • ios