ದುಬೈ(ಜ.13): ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಕಲ್ಪನೆಯ ಭಾರತದ ಕುರಿತು ಮಾತನಾಡುವ ವೇಳೆ ಎರಡು ಕಠಿಣ ಪ್ರಶ್ನೆಗಳು ಎದುರಾದುವು.

ಜಾತಿ ನಿರ್ಮೂಲನೆ, ಜಾತ್ಯಾತೀತತೆ ಬಗ್ಗೆ ಮಾತನಾಡುವ ವೇಳೆ ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗುಡಿ ಗುಂಡಾಂತರಗಳನ್ನು ಸುತ್ತಿದ್ದು ಮತ್ತು ಕಾಶ್ಮೀರ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದು ಸರಿಯೇ ಎಂದು ಬಾಲಕಿಯೊಬ್ಬಳು  ಪ್ರಶ್ನಿಸಿದ್ದಾಳೆ. 

ಇದಕ್ಕೆ ನಗುತ್ತಲೇ ಉತ್ತರಿಸಿದ ರಾಹುಲ್, ತಾವು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವುದಾಗಿ ಹೇಳಿದ್ದಾರೆ. ಅಲ್ಲದೇ ಇದೇ ಸದ್ಯ ಭಾರತಕ್ಕೆ ಅವಶ್ಯ ಎಂದು ತಮ್ಮನ್ನು ಸಮರ್ಥಿಸಿಕೊಂಡರು.

ಮೈನೇಶನ್ ಜೊತೆ ಈ ಕುರಿತು ಮಾತನಾಡಿದ ಕಾಂಗ್ರೆಸ್ ಕಾರ್ಯದರ್ಶಿ ಡಾ. ಆರತಿ ಕೃಷ್ಣನ್, ಅಂತಹ ಪ್ರಶ್ನೆಗಳು ಕೇಳಲಾಗಿರುವುದನ್ನು ಖಚಿತಪಡಿಸಿದ್ದಾರೆ. ಬಾಲಕಿಯ ಪ್ರಶ್ನೆಗೆ, ತಾವು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವುದಾಗಿ ರಾಹುಲ್ ಗಾಂಧಿ ಉತ್ತರಿಸಿದ್ದಾರೆ. 

ಬಾಲಕಿಯ ಎರಡನೇ ಪ್ರಶ್ನೆಗೆ, ನೀವು ಭಾರತದ ಪ್ರಧಾನಿಯಾದರೆ ಏನು ಮಾಡುತ್ತೀರಿ ಎಂದು ರಾಹುಲ್ ಗಾಂಧಿ ಮರುಪ್ರಶ್ನಿಸಿದ್ದಾರೆ.