ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳುವುದಾಗಿ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್‌ ಗಾಂಧಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಕರ್ನಾಟಕ ಚುನಾವಣೆ ಮುಗಿದು ಒಂದೂವರೆ ತಿಂಗಳಾಗುತ್ತಿದ್ದರೂ ರಾಹುಲ್‌ ಯಾತ್ರೆ ಬಯಕೆ ಕೈಗೂಡಿಲ್ಲ. ಬದಲಾಗಿ ಕಗ್ಗಂಟಾಗಿದೆ. 

ನವದೆಹಲಿ (ಜೂ. 26): ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳುವುದಾಗಿ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್‌ ಗಾಂಧಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಕರ್ನಾಟಕ ಚುನಾವಣೆ ಮುಗಿದು ಒಂದೂವರೆ ತಿಂಗಳಾಗುತ್ತಿದ್ದರೂ ರಾಹುಲ್‌ ಯಾತ್ರೆ ಬಯಕೆ ಕೈಗೂಡಿಲ್ಲ. ಬದಲಾಗಿ ಕಗ್ಗಂಟಾಗಿದೆ.

ಕೈಲಾಶ ಮಾನಸ ಸರೋವರಕ್ಕೆ ತೆರಳಲು ರಾಹುಲ್‌ ಅವರು ವಿದೇಶಾಂಗ ಸಚಿವಾಲಯದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಹೇಳಿಕೊಂಡಿದ್ದರೆ, ಈ ಸಂಬಂಧ ರಾಹುಲ್‌ ಅವರಿಂದ ಅಧಿಕೃತ ಅರ್ಜಿಯೇ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಿಶೇಷ ಎಂದರೆ, ಕೈಲಾಶ ಮಾನಸ ಸರೋವರ ಯಾತ್ರೆಗೆ ಅರ್ಜಿ ಸಲ್ಲಿಸುವ ಅಂತಿಮ ಗಡುವು ಮಾ.23ಕ್ಕೇ ಮುಗಿದುಹೋಗಿದೆ. ಆದರೆ ಆ ಯಾತ್ರೆ ಕೈಗೊಳ್ಳುವ ಕುರಿತು ರಾಹುಲ್‌ ಘೋಷಣೆ ಮಾಡಿದ್ದು ಏ.30ರಂದು. ಆದಾಗ್ಯೂ ಸಂಸದ ಎಂಬ ಕಾರಣಕ್ಕೆ ವಿದೇಶಾಂಗ ಸಚಿವಾಲಯದಿಂದ ವಿಶೇಷ ಅನುಮತಿ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಚೀನಾ ಭೂಭಾಗದಲ್ಲಿರುವ ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳುವವರು ವಿದೇಶಾಂಗ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯ. ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ನಡೆಯುವ ಯಾತ್ರೆ ಇದಾಗಿದ್ದು, ಜೂ.8 ರಿಂದ ಈ ವರ್ಷದ ಯಾತ್ರೆ ಪ್ರಾರಂಭವಾಗಿದೆ.