ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ‘ಜೇಟ್-ಲೈ’ (ಸುಳ್ಳುಗಾರ) ಎಂದು ಬೈದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೇಲ್ನೋಟಕ್ಕೆ ಹಕ್ಕುಚ್ಯುತಿ ಎಸಗಿರುವುದು ಸಾಬೀತಾಗಿದೆ ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳು ಶನಿವಾರ ಹೇಳಿವೆ.
ನವದೆಹಲಿ (ಜ.07): ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ‘ಜೇಟ್-ಲೈ’ (ಸುಳ್ಳುಗಾರ) ಎಂದು ಬೈದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೇಲ್ನೋಟಕ್ಕೆ ಹಕ್ಕುಚ್ಯುತಿ ಎಸಗಿರುವುದು ಸಾಬೀತಾಗಿದೆ ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳು ಶನಿವಾರ ಹೇಳಿವೆ. ಈ ಹಿನ್ನೆಲೆಯಲ್ಲಿ ವೆಂಕಯ್ಯ ಅವರು ತಮ್ಮ ಮುಂದೆ ಸಲ್ಲಿಕೆಯಾಗಿದ್ದ ಹಕ್ಕುಚ್ಯುತಿ ನೋಟಿಸ್‌ಅನ್ನು ಮುಂದಿನ ಕ್ರಮಕ್ಕಾಗಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ರವಾನಿಸಿದ್ದಾರೆ.
ರಾಹುಲ್ ಗಾಂಧಿ ಅವರು ಕೆಳಮನೆ ಸದಸ್ಯರಾಗಿರುವ ಕಾರಣ ಮಹಾಜನ್ ಅವರಿಗೆ ನೋಟಿಸ್ ಅನ್ನು ರವಾನಿಸಿದ್ದಾರೆ. ‘ವಿಷಯದ ಬಗ್ಗೆ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಹಕ್ಕುಚ್ಯುತಿ ಆಗಿದ್ದು ಕಂಡುಬರುತ್ತಿದೆ’ ಎಂದು ವೆಂಕಯ್ಯ ಅವರು ನೋಟಿಸ್ ಹಸ್ತಾಂತರಿಸುವಾಗ ಹೇಳಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ಮೂಲಗಳು ತಿಳಿಸಿವೆ.
ಈಗಾಗಲೇ ರಾಹುಲ್ ವಿರುದ್ಧದ ದೂರು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅಧ್ಯಕ್ಷರಾಗಿರುವ ಲೋಕಸಭೆಯ ನೈತಿಕ ಸಮಿತಿ ಮುಂದೆ ಇದೆ. ಬಿಜೆಪಿ ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್ ಅವರು ಇತ್ತೀಚೆಗೆ ರಾಹುಲ್ ವಿರುದ್ಧ ನೋಟಿಸ್ ನೀಡಿ, ‘ರಾಹುಲ್ ಅವರು ಜೇಟ್ಲಿ ಅವರನ್ನು ತೆಗಳಿ ಹಕ್ಕುಚ್ಯುತಿ ಮಾಡಿದ್ದಾರೆ’ ಎಂದು ಹಕ್ಕುಚ್ಯುತಿ ಪ್ರಸ್ತಾವಕ್ಕೆ ಕೋರಿದ್ದರು.
