ಅರ್ಥಶಾಸ್ತ್ರ ನೊಬೆಲ್ ಯಾರಿಗೆ ಲಭಿಸಬಹುದು ಎಂದು ಅಮೆರಿಕ ಸಂಸ್ಥೆಯೊಂದು ಸಿದ್ಧಪಡಿಸಿರುವ ಸಂಭಾವ್ಯರ ಪಟ್ಟಿಯಲ್ಲಿ ರಾಜನ್ ಅವರಿಗೂ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ಇಂತಹದ್ದೊಂದು ಕುತೂಹಲ ಸೃಷ್ಟಿಯಾಗಿದೆ.

ನ್ಯೂಯಾರ್ಕ್(ಅ.07): ವಿತ್ತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದವರಿಗೆ ನೀಡಲಾಗುವ ಅರ್ಥಶಾಸ್ತ್ರ ನೊಬೆಲ್ ಈ ಬಾರಿ ವಿಶ್ವವಿಖ್ಯಾತ ಹಣಕಾಸು ತಜ್ಞರೂ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಂ ರಾಜನ್ ಅವರ ಪಾಲಾಗಲಿದೆಯೇ?

ಅರ್ಥಶಾಸ್ತ್ರ ನೊಬೆಲ್ ಯಾರಿಗೆ ಲಭಿಸಬಹುದು ಎಂದು ಅಮೆರಿಕ ಸಂಸ್ಥೆಯೊಂದು ಸಿದ್ಧಪಡಿಸಿರುವ ಸಂಭಾವ್ಯರ ಪಟ್ಟಿಯಲ್ಲಿ ರಾಜನ್ ಅವರಿಗೂ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ಇಂತಹದ್ದೊಂದು ಕುತೂಹಲ ಸೃಷ್ಟಿಯಾಗಿದೆ.

ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕ್ಲಾರಿವೇಟ್ ಅನಲಿಟಿಕ್ಸ್ ಎಂಬ ಕಂಪನಿ ಡಜನ್‌ಗಟ್ಟಲೆ ಸಂಭಾವ್ಯರ ಪಟ್ಟಿಯನ್ನು ತಯಾರಿಸಿದ್ದು, ಅದರಲ್ಲಿ ರಾಜನ್ ಆರನೇ ಸ್ಥಾನ ಗಳಿಸಿದ್ದಾರೆ.

40ನೇ ವಯಸ್ಸಿನಲ್ಲೇ ಐಎಂಎಫ್‌ನಲ್ಲಿ ಮುಖ್ಯ ಹಣಕಾಸು ತಜ್ಞರಾಗಿ ನೇಮಕಗೊಂಡಿದ್ದ ರಾಜನ್ ಅವರು,2008ರಲ್ಲಿ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ಮೂರು ವರ್ಷಗಳ ಮೊದಲೇ ಭವಿಷ್ಯ ನುಡಿದಿದ್ದರು. ಅದು ನಿಜವಾಗುವುದರೊಂದಿಗೆ ರಾಜನ್ ಅವರ ಬಗ್ಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕ್ಲಾರಿವೇಟ್ ಪಟ್ಟಿಯಲ್ಲಿ ಸ್ಥಾನ ಪಡೆದಾಕ್ಷಣ ನೊಬೆಲ್ ಲಭಿಸುತ್ತದೆ ಎಂದಲ್ಲ. ಇದೊಂದು ಸಂಭಾವ್ಯರ ಪಟ್ಟಿ. ಸೋಮವಾರ ಅರ್ಥಶಾಸ್ತ್ರ ನೊಬೆಲ್ ಪ್ರಕಟವಾಗಲಿದೆ.