ಗೌರಿ ಲಂಕೇಶ್ ಹತ್ಯೆಗೆ ಶ್ರೀಗಳೇ ಸುಪಾರಿ ಕೊಟ್ಟಿದ್ದಾರೆ ಎಂದು ಪ್ರೇಮಲತಾ ದಿವಾಕರ್ ದಂಪತಿ ತಮ್ಮ ದೂರಿನಲ್ಲಿ ಶಂಕಿಸಿದ್ದಾರೆ. ಕುತೂಹಲದ ವಿಚಾರವೆಂದರೆ, ಗೌರಿ ಹತ್ಯೆಯಾದ ಮೂರನೇ ದಿನವೇ, ಅಂದರೆ ಸೆ. 8ರಂದೇ ಪ್ರೇಮಲತಾ ದಿವಾಕರ್ ದಂಪತಿಯು ಈ ದಾಖಲೆಗಳನ್ನು ಎಸ್'ಐಟಿ ಅಧಿಕಾರಿಗಳಿಗೆ ನೀಡಿದ್ದರೆನ್ನಲಾಗಿದೆ.

ಬೆಂಗಳೂರು(ಸೆ. 16): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾರೀ ಟ್ವಿಸ್ಟ್ ಸಿಕ್ಕಿದೆ. ಹತ್ಯೆ ಹಿಂದೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಅವರ ಕೈವಾಡ ಇದೆ ಎಂಬ ಶಂಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಎಸ್'ಐಟಿ ಅಧಿಕಾರಿಗಳಿಗೆ ದೂರೂ ಕೂಡ ಸಲ್ಲಿಕೆಯಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಿದ್ದ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿಯಿಂದಲೇ ಈ ದೂರು ಬಂದಿದೆ. 500ಕ್ಕೂ ಹೆಚ್ಚು ಪುಟಗಳ ದಾಖಲೆಯನ್ನು ಈ ದಂಪತಿಯು ಎಸ್'ಐಟಿಗೆ ಹಸ್ತಾಂತರಿಸಿದೆ ಎಂಬ ಮಾತು ಕೇಳಿಬಂದಿದೆ. ಅಷ್ಟೇ ಅಲ್ಲ, ಗೌರಿ ಹತ್ಯೆಯಲ್ಲಿ ರಾಘವೇಶ್ವರ ಶ್ರೀಗಳ ಕೈವಾಡ ಇರಬಹುದೆಂದು ಶಂಕಿಸಿ ಎಸ್'ಐಟಿ ಅಧಿಕಾರಿಗಳಿಗೆ ಹಲವಾರು ಕರೆಗಳೂ ಬಂದಿವೆಯಂತೆ.

ಗೌರಿ ಲಂಕೇಶ್ ಹತ್ಯೆಗೆ ಶ್ರೀಗಳೇ ಸುಪಾರಿ ಕೊಟ್ಟಿದ್ದಾರೆ ಎಂದು ಪ್ರೇಮಲತಾ ದಿವಾಕರ್ ದಂಪತಿ ತಮ್ಮ ದೂರಿನಲ್ಲಿ ಶಂಕಿಸಿದ್ದಾರೆ. ಕುತೂಹಲದ ವಿಚಾರವೆಂದರೆ, ಗೌರಿ ಹತ್ಯೆಯಾದ ಮೂರನೇ ದಿನವೇ, ಅಂದರೆ ಸೆ. 8ರಂದೇ ಪ್ರೇಮಲತಾ ದಿವಾಕರ್ ದಂಪತಿಯು ಈ ದಾಖಲೆಗಳನ್ನು ಎಸ್'ಐಟಿ ಅಧಿಕಾರಿಗಳಿಗೆ ನೀಡಿದ್ದರೆನ್ನಲಾಗಿದೆ.

ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಕಠಿಣವಾಗಿ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ಸ್ವಾಮೀಜಿ ಕೊಲ್ಲಿಸಿದ್ದಾರೆಂದು ಈ ದಂಪತಿಯು ಅನುಮಾನ ಪಟ್ಟಿದ್ದಾರೆ.

ಆದರೆ, ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿ ನೀಡಿದ 500 ಪುಟಗಳ ದಾಖಲೆಗಳನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಎಸ್ಐಟಿ ಮೂಲಗಳ ಪ್ರಕಾರ, ಪರಿಶೀಲನೆ ವೇಳೆ ಸ್ವಾಮಿಗಳ ವಿರುದ್ಧದ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿಲ್ಲವಂತೆ. ಆದರೆ, ಎಸ್'ಐಟಿ ಅಧಿಕಾರಿಗಳು ಬಹಳ ಸಂಯಮದಿಂದ ಪ್ರತಿಯೊಂದು ದಾಖಲೆಯನ್ನು ಕೂಲಂಕಷವಾಗಿ ಪರಿಶೀಲಿಸುವುದನ್ನು ಮುಂದುವರಿಸಿದ್ದಾರೆ.