ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿರುವುದರ ಲಾಭವನ್ನು ಪ್ರತಿಯೊಬ್ಬರೂ ಪಡೆಯಲು ಯತ್ನಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಮಹತ್ವದ್ದಾಗಿದೆ.
ಬೆಂಗಳೂರು(ಏ. 17): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷ ಗಾದಿಗೆ ಈಗಾಗಲೇ ಕಸರತ್ತು ಆರಂಭಗೊಂಡಿದೆ. ರಾಜ್ಯದ ಹಿರಿಯ ಕಾಂಗ್ರೆಸ್ಸಿಗರನೇಕರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಹಾಲಿ ಅಧ್ಯಕ್ಷ ಜಿ.ಪರಮೇಶ್ವರ್ ತಾವೇ ಅಧ್ಯಕ್ಷಗಾದಿಯಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಿರೀಕ್ಷೆಗಿಂತ ಹೆಚ್ಚು ಕಗ್ಗಂಟಾಗಬಹುದು.
ಯಾರಿದ್ದಾರೆ ರೇಸ್'ನಲ್ಲಿ?
1) ಡಿ.ಕೆ.ಶಿವಕುಮಾರ್
2) ಎಂ.ಬಿ.ಪಾಟೀಲ್
3) ಎಸ್.ಆರ್.ಪಾಟೀಲ್
4) ಕೆಎಚ್ ಮುನಿಯಪ್ಪ
5) ಹೆಚ್.ಸಿ.ಮಹದೇವಪ್ಪ
6) ಜಿ.ಪರಮೇಶ್ವರ್
ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿರುವುದರ ಲಾಭವನ್ನು ಪ್ರತಿಯೊಬ್ಬರೂ ಪಡೆಯಲು ಯತ್ನಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಮಹತ್ವದ್ದಾಗಿದೆ. ಜೊತೆಗೆ, ಜಿ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರ ಪಾತ್ರವೂ ಮುಖ್ಯವಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಡಿಕೆಶಿ, ಎಂಬಿ ಪಾಟೀಲ್, ಕೆಹೆಚ್ ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ.
ಡಿಕೆಶಿ ಪ್ರತಿಕ್ರಿಯೆ:
ಆದರೆ, ಸುವರ್ಣನ್ಯೂಸ್'ಗೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ತಾನು ಹೈಕಮಾಂಡ್ ಬಳಿ ಯಾವುದೇ ಲಾಬಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕಿಕೊಂಡು ಕೂತಿಲ್ಲ. ನಾನು ಅಧ್ಯಕ್ಷ ಸ್ಥಾನಾಕಾಂಕ್ಷಿಯಾದರೂ ಅದಕ್ಕಾಗಿ ಪಕ್ಷದ ವರಿಷ್ಠರ ಬಳಿ ಕೇಳಿಕೊಂಡು ಹೋಗೋದಿಲ್ಲ," ಎಂದಿದ್ದಾರೆ.
ಪಕ್ಷದಲ್ಲಿ ಎಲ್ಲರೂ ಸಮ್ಮತಿಸಿದರೆ ಮಾತ್ರ ತಾನು ರಾಜ್ಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯುತ್ತೇನೆ ಎಂದೂ ಡಿಕೆಶಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
