ಎಲ್ಲಿಗೆ ಹೋದರೂ ಬೆಂಕಿ ಪೊಟ್ಟಣ ಮತ್ತು ಪೆಟ್ರೋಲ್ ಹಿಡಿದುಕೊಂಡು ಹೋಗಿ ಬೆಂಕಿ ಹಚ್ಚುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಕಿ ರಾಮಯ್ಯ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಲೇವಡಿ ಮಾಡಿದ್ದಾರೆ.

ಬೆಂಗಳೂರು: ಎಲ್ಲಿಗೆ ಹೋದರೂ ಬೆಂಕಿ ಪೊಟ್ಟಣ ಮತ್ತು ಪೆಟ್ರೋಲ್ ಹಿಡಿದುಕೊಂಡು ಹೋಗಿ ಬೆಂಕಿ ಹಚ್ಚುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಕಿ ರಾಮಯ್ಯ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಲೇವಡಿ ಮಾಡಿದ್ದಾರೆ.

ನಗರದ ಹೊರವಲಯದಲ್ಲಿ ಭಾನುವಾರ ನಡೆದ ಬಿಜೆಪಿ ವಿಸ್ತಾರಕರ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಂಕಿ ಹಚ್ಚುವುದು ಸಿದ್ದರಾಮಯ್ಯ ಅವರ ಗುಣ. ಬೆಂಕಿ ಹಚ್ಚಿದ ಮೇಲೆ ನನಗೇನು ಗೊತ್ತಿಲ್ಲ ಎಂಬಂತೆ ಸುಮ್ಮನಿದ್ದು ಬಿಡುತ್ತಾರೆ. ಇಂತಹ ವ್ಯಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ಎದುರಿಸಲು ಪಕ್ಷವನ್ನು ಮತ್ತಷ್ಟು ಸಂಘಟಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವ್ಯಕ್ತಿ ಆಧಾರಿತ ಪಕ್ಷಗಳಾದರೆ, ಬಿಜೆಪಿ ಮಾತ್ರ ಕೇಡರ್ ಪಕ್ಷವಾಗಿದೆ. ದೇಶದ ಪರಿಕಲ್ಪನೆ ಇಟ್ಟುಕೊಂಡು ಹರಿಯುವ ನದಿಯಂತೆ ಕೆಲಸ ಮಾಡುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾಗಾಂಧಿ ಇಲ್ಲದಿದ್ದರೆ ಆ ಪಕ್ಷವು ಮುಚ್ಚಿಹೋಗುತ್ತದೆ. ಅಂತೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತವರ ಕುಟುಂಬ ಸದಸ್ಯರು ಇಲ್ಲದಿದ್ದರೆ ಜೆಡಿಎಸ್ ಬಾಗಿಲು ಹಾಕಬೇಕಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವ್ಯಕ್ತಿ ಆಧಾರಿತ ಪಕ್ಷಗಳಾಗಿವೆ. ಆದರೆ, ಬಿಜೆಪಿ ಇದಕ್ಕೆ ಅಪವಾದವಾಗಿದೆ. ಹರಿಯುವ ನದಿಯಂತೆ ಸದಾ ತತ್ವ, ಆದರ್ಶ, ಸಿದ್ಧಾಂತಗಳ ಮೇಲೆ ನಿಂತಿದೆ. ದೇಶದ ಪರಿಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು.