Asianet Suvarna News Asianet Suvarna News

ಹಾಸನದಲ್ಲೇ ಗೆದ್ದಿದ್ದೇವೆ ಮಂಡ್ಯದಲ್ಲಿ ಗೆಲುವು ಕಷ್ಟವಾ ?

ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿಲ್ಲ. ಜಿಲ್ಲೆಯಲ್ಲಿ 20 ಮಂದಿ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ರೈತರ ಸಾಲಮನ್ನಾ ಆಗಿರೋದು ಕೇವಲ 5 ಸಾವಿರ ಕೋಟಿ ಅಷ್ಟೇ.

R Ashok lashes out Congress, JDS Leaders
Author
Bengaluru, First Published Oct 24, 2018, 3:49 PM IST

ಪಾಂಡವಪುರ[ಅ.24]: ನಾವು ಈ ಬಾರಿ ಜೆಡಿಎಸ್ ಭದ್ರ ಕೋಟೆಯನ್ನು ಛಿದ್ರ ಮಾಡುತ್ತೇವೆ. ಈ ಕೋಟೆಯನ್ನು ಬೇಧಿಸುವ ಮೂಲಕ ಬಿಜೆಪಿ ಹೊಸ ಅಧ್ಯಾಯ ಆರಂಭಿಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಶಾಂತಿನಗರದ ಸಾಯಿಮಂದಿರದಲ್ಲಿ ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಹುಟ್ಟಿದ ಊರಲ್ಲಿಯೇ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ ಇನ್ನೇನು ಮಂಡ್ಯ ನಮಗೆ ಕಷ್ಟವಾ? ಜೆಡಿಎಸ್ ಭದ್ರಕೋಟೆ ಎಂದು ಹೇಳಿಕೊಳ್ಳುವ ಜೆಡಿಎಸ್‌ಗೇ ಆಶ್ಚರ್ಯವಾಗುವಂತೆ ಈ ಭಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು. 

ಕೇವಲ ಭರವಸೆಯ ಸರ್ಕಾರ: ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿಲ್ಲ. ಜಿಲ್ಲೆಯಲ್ಲಿ 20 ಮಂದಿ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ರೈತರ ಸಾಲಮನ್ನಾ ಆಗಿರೋದು ಕೇವಲ 5 ಸಾವಿರ ಕೋಟಿ ಅಷ್ಟೇ. ಇನ್ನೂ 43 ಸಾವಿರ ಕೋಟಿ ಹಣ ಮನ್ನಾ ಆಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ
ಕೇವಲ ಭರವಸೆಗಳನ್ನು ಕೊಡುತ್ತಾ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂಡಾಯಗಾರರ ಬೆಂಬಲ: ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮವಾದ ಅವಕಾಶ ಬಂದಿದೆ. ಈ ಹಿಂದೆ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಕ್ಷೇತರ ಅಭ್ಯರ್ಥಿ ಗೆದ್ದಿರುವ ಉದಾಹರಣೆ ಇದೆ. ಅದೇ ರೀತಿ ಈ ಭಾರಿ ಜಿಲ್ಲೆಯಲ್ಲಿಎಲ್ಲಾ ಕ್ಷೇತ್ರದಲ್ಲೂ ಜೆಡಿಎಸ್ ಶಾಸಕರಿದ್ದರೂ ಸಹ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಬಂಡಾಯರು ನಮಗೆ ಮತಹಾಕಲಿದ್ದಾರೆ ಎಂದರು.

ಶಾಸಕ ನಾಗೇಂದ್ರ ಮಾತನಾಡಿ, ಜಿಲ್ಲೆಯ ಈ ಭಾರಿ ಬಿಜೆಪಿಗೆ ಇರುವ ಉತ್ತಮವಾದ ಅವಕಾಶ ಇರುವುದರಿಂದ ಅದನ್ನು ಸದ್ಬಳಕೆ ಮಾಡಿಕೊಂಡು ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು. ನಾಳೆ ನಡೆಯುವ ಸಭೆಗೆ ಕನಿಷ್ಠ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬರುವಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರು ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಮಾತನಾಡಿ, ಪತ್ರಕರ್ತ ಗಂಗಾಧರ್ ಮೂರ್ತಿ ಕೊಲೆ ಪ್ರಕರಣದಲ್ಲಿ ದೇವೇಗೌಡರೇ ಶಿವರಾಮೇಗೌಡರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೀಗ ಅವರನ್ನೇ ಅಭ್ಯರ್ಥಿ ಮಾಡಿರುವುದು ಶೋಚನೀಯ ಸಂಗತಿ ಎಂದರು.

ಇದೇ ವೇಳೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರೈತಸಂಘದ ಹಲವು ಕಾರ್ಯಕರ್ತರು ಸಹ ಭಾಗವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ತಾಲೂಕು ಅಧ್ಯಕ್ಷ ಪ.ಮಾ.ರಮೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್. ಎನ್. ಮಂಜುನಾಥ್, ವೀಕ್ಷಕ ರಾಜೇಂದ್ರ, ರಾಜ್ಯ ಮುಖಂಡ ಜೆ.ಶಿವಲಿಂಗೇಗೌಡ, ರೈಸ್‌ಮಿಲ್ ತಮ್ಮಣ್ಣ, ಸಂದೇಶ್, ಶ್ರೀನಿವಾಸ್ ನಾಯ್ಕ, ಕಣಿವೆ ಮಹೇಶ್, ಡೈರಿ ರಾಮು, ಆನಂದ್, ಚಿಕ್ಕಣ್ಣ ಉಪಸ್ಥಿತರಿದ್ದರು.
 

Follow Us:
Download App:
  • android
  • ios