ಬೆಂಗಳೂರು[ಸೆ.18]: ಕಂದಾಯ ಸಚಿವರಾದ ಆರ್‌.ಅಶೋಕ್‌ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ನನ್ನ ಅಣ್ಣನ ಸಮಾನ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಬಿಜೆಪಿ ಕಚೇರಿಯ ಬಳಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕಂದಾಯ ಸಚಿವರು ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದು ಕೇವಲ ವದಂತಿ. ಈಗಲೂ ಅಶೋಕ್‌ ಅವರ ಜತೆ ನಾನು ಊಟ ಮಾಡುತ್ತೇನೆ. ಅವರ ಮನೆಗೂ ಹೋಗಿಬರುತ್ತೇನೆ. ಹಲವು ಸಂದರ್ಭಗಳಲ್ಲಿ ಅವರ ಜತೆ ಓಡಾಡಿದ್ದೇನೆ. ಅವರು ನನಗೆ ಅಣ್ಣನ ಸಮಾನ, ಹೀಗಾಗಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ ಎಂದರು.

ಅಶೋಕ ಅವರ ಕುಟುಂಬ ಹಾಗೂ ನಮ್ಮ ಕುಟುಂಬ ಸಹೋದರರ ರೀತಿ ಇದ್ದೇವೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರ ಇವತ್ತು ಬರುತ್ತೆ, ನಾಳೆ ಹೋಗುತ್ತದೆ. ಅಧಿಕಾರಕ್ಕಾಗಿ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಸಾಧ್ಯವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಸಿಎಂ ಉಸ್ತುವಾರಿ ಉತ್ತಮ:

ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಂಡಿರುವುದು ಉತ್ತಮ. ಇದರಿಂದ ಬೆಂಗಳೂರು ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಇದೇ ವೇಳೆ ಉಪಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಯಡಿಯೂರಪ್ಪ ಅವರ ಜತೆ ನಾವು ಕೈಜೋಡಿಸಿಕೊಂಡು ಕೆಲಸ ಮಾಡುತ್ತೇವೆ. ಒಟ್ಟಾರೆ ಬೆಂಗಳೂರು ನಗರದ ಅಭಿವೃದ್ಧಿಗೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ. ಎಲ್ಲೇ ಇದ್ದರೂ ನನಗೆ ವಹಿಸಿದ ಜವಾಬ್ದಾರಿ ನಿರ್ವಹಿಸುವ ವಿಶ್ವಾಸವಿದೆ. ಬೆಂಗಳೂರು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ ಒತ್ತು ನೀಡುತ್ತೇವೆ. ಮುಖ್ಯಮಂತ್ರಿ ಅವರೇ ಬೆಂಗಳೂರು ಉಸ್ತುವಾರಿ ಹೊಂದಿರುವುದರಿಂದ ಪ್ರತಿ 15 ದಿನಕ್ಕೊಮ್ಮೆ ನಗರ ದರ್ಶನ ಮಾಡಿ, ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಮನಗರ ಜಿಲ್ಲಾ ಉಸ್ತುವಾರಿ ನೀಡಿರುವುದು ನನಗೆ ಸದವಕಾಶ. ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದರು.