"ಸಿದ್ದರಾಮಯ್ಯನವರ ಪರ ಕೆಲಸ ಮಾಡುತ್ತಿರುವ ನೀವು ಈಗ ನಮ್ಮ ಬಳಿ ಬಂದು ಸಹಕಾರಿ ಕೊಡಿ ಎಂದು ಕೇಳುತ್ತೀರಲ್ಲ.. ನಾಚಿಕೆ ಆಗೊಲ್ವಾ..? ಯಾವುದೇ ಕಾರಣಕ್ಕೂ ನಿಮಗೆ ಸಹಕಾರ ಕೊಡಲ್ಲ. ನಾವು ಮಂಗಳೂರು ಚಲೋ ಬೈಕ್ ರ್ಯಾಲಿ ಮಾಡೇ ಮಾಡ್ತೀವಿ" ಎಂದು ಪೊಲೀಸರಿಗೆ ಆರ್.ಅಶೋಕ್ ಆವಾಜ್ ಹಾಕಿದರು.

ಬೆಂಗಳೂರು(ಸೆ. 05): ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಯುತ್ತಿದೆ ಎಂದು ಖಂಡಿಸಿ ಬಿಜೆಪಿ ನಾಯಕರು ನಗರದ ವಿವಿಧೆಡೆ "ಮಂಗಳೂರು ಚಲೋ" ಬೈಕ್ ರ್ಯಾಲಿ ನಡೆಸಿದರು. ಈ ವೇಳೆ, ಆರ್.ಅಶೋಕ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿದರು. ಆದರೆ, ಮಾಜಿ ಡಿಸಿಎಂ ಆರ್.ಅಶೋಕ್ ಬಂಧಿತರಾಗುವ ಮುನ್ನ ಸಾಕಷ್ಟು ಪ್ರತಿರೋಧ ಒಡ್ಡಿದರು. ವಿನಾಕಾರಣ ಅಮಾಯಕ ಕಾರ್ಯಕರ್ತರನ್ನು ಬಂಧಿಸುತ್ತಿದ್ದೀರಿ ಎಂದು ಪೊಲೀಸರ ಮೇಲೇ ಹರಿಹಾಯ್ದರು.

"ಸಿದ್ದರಾಮಯ್ಯನವರ ಪರ ಕೆಲಸ ಮಾಡುತ್ತಿರುವ ನೀವು ಈಗ ನಮ್ಮ ಬಳಿ ಬಂದು ಸಹಕಾರಿ ಕೊಡಿ ಎಂದು ಕೇಳುತ್ತೀರಲ್ಲ.. ನಾಚಿಕೆ ಆಗೊಲ್ವಾ..? ಯಾವುದೇ ಕಾರಣಕ್ಕೂ ನಿಮಗೆ ಸಹಕಾರ ಕೊಡಲ್ಲ. ನಾವು ಮಂಗಳೂರು ಚಲೋ ಬೈಕ್ ರ್ಯಾಲಿ ಮಾಡೇ ಮಾಡ್ತೀವಿ" ಎಂದು ಪೊಲೀಸರಿಗೆ ಆರ್.ಅಶೋಕ್ ಆವಾಜ್ ಹಾಕಿದರು.

ವಾರಂಟ್ ಇದೆಯಾ?
ಬೈಕ್ ರ್ಯಾಲಿಗೆ ಮುಂದಾಗಿದ್ದ ಆರ್.ಅಶೋಕ್ ಮತ್ತಿತರ ಬಿಜೆಪಿ ಮುಖಂಡರ ಬಳಿ ಪೊಲೀಸರು ಬೈಕ್ ಲೈಸೆನ್ಸ್ ಮತ್ತು ಇನ್ಷೂರೆನ್ಸ್ ಪರವಾನಿಗೆ ಕೇಳಿದರು. ಇದಕ್ಕೆ ಪ್ರತಿಯಾಗಿ, ತನ್ನ ಬಂಧಿಸಲು ತಮ್ಮ ಬಳಿ ವಾರೆಂಟ್ ಇದೆಯಾ ಎಂದು ಆರ್.ಅಶೋಕ್ ಕೇಳಿದರು.

ಎಸ್'ಡಿಪಿಐ ವಿರುದ್ಧದ ಪ್ರಕರಣಗಳನ್ನು ಮುಚ್ಚಿಹಾಕಿದ್ದೇಕೆ?
ಈ ವೇಳೆ, ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಆರ್.ಅಶೋಕ್, ರಾಜ್ಯದಲ್ಲಿ ಬಿಜೆಪಿಗಿರುವ ಬೆಂಬಲ ಕಂಡು ಸರಕಾರಕ್ಕೆ ಭಯ ಹುಟ್ಟಿದೆ ಎಂದು ಟೀಕಿಸಿದರು. "ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಪಿಎಫ್'ಐ ಮತ್ತು ಎಸ್'ಡಿಪಿಐ ಸಂಘಟನೆಗಳಿಗೆ ಸೇರಿದ 1600ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ 175 ಪ್ರಕರಣಗಳಿದ್ದವು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಾಡಿದ ಮೊದಲ ಕೆಲಸವೆಂದರೆ 2015ರಲ್ಲಿ ಈ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಂಡಿದ್ದು. ಸರಕಾರದ ಕ್ರಮದಿಂದ ಈ ಸಂಘಟನೆಗಳಿಗೆ ಇನ್ನಷ್ಟು ಹುಮ್ಮಸ್ಸು ತಂದಿತು. 2015ರಿಂದ 8 ಹಿಂದೂವಾದಿ ಕಾರ್ಯಕರ್ತರ ಹತ್ಯೆಯಲ್ಲಿ ಈ ಸಂಘಟನೆಗಳ ಕೈವಾಡ ಇರುವುದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ಎನ್'ಐಎಗೆ ವಹಿಸಬೇಕು" ಎಂದು ಆರ್.ಅಶೋಕ್ ಆಗ್ರಹಿಸಿದರು.

ಯಡಿಯೂರಪ್ಪ ಸಿಎಂ ಅಭ್ಯರ್ಥಿಯಾದಾಗಲೇ ಕಾಂಗ್ರೆಸ್ ಕಥೆ ಮುಗಿಯಿತು..!
ಇನ್ನು ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ತಡೆಯುತ್ತಿರುವ ಸಿದ್ದರಾಮಯ್ಯ ಸರಕಾರವನ್ನು ಆರ್.ಅಶೋಕ್ ಕಠಿಣ ಪದಗಳಲ್ಲಿ ಖಂಡಿಸಿದರು. "ನಾವು ಇಂಥ ಇನ್ನೂ 10 ರ್ಯಾಲಿಗಳನ್ನು ನಡೆಸುತ್ತೇವೆ. ನಿಮ್ಮಂಥ 10 ಸಿದ್ದರಾಮಯ್ಯನವರು ಬಂದರೂ ಬಿಜೆಪಿಗೆ ಏನೂ ಮಾಡೋಕ್ಕಾಗಲ್ಲ. ನೀವು ಇಲ್ಲಿ ನಮ್ಮನ್ನು ತಡೆಯಬಹುದು. ಬೇರೆ ಸ್ಥಳಗಳಲ್ಲೂ ತಡೆಯಬಹುದು. ಆದರೆ, ಮಂಗಳೂರಿಗೆ ನಾವೆಲ್ಲರೂ ಹೋಗೋದನ್ನು ನಿಮ್ಮಿಂದ ತಡೆಯಲು ಆಗುವುದಿಲ್ಲ. ಲಕ್ಷಾಂತರ ಕಾರ್ಯಕರ್ತರು ಬರುತ್ತಾರೆ. ಎಷ್ಟು ಮಂದಿಯನ್ನು ನೀವು ಬಂಧಿಸುತ್ತೀರಿ?" ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಟೀಕಿಸಿದರು.

ಯಡಿಯೂರಪ್ಪನವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ದಿನವೇ ಸಿದ್ದರಾಮಯ್ಯನವರ ಕಥೆ ಮುಗಿಯಿತು. ಅಮಿತ್ ಶಾ ಬಂದು ಹೋದ ಮೇಲಂತೂ ಕಾಂಗ್ರೆಸ್ಸಿಗರು ಥರಥರ ನಡುಗುತ್ತಿದ್ದಾರೆ. ಕರ್ನಾಟಕದಲ್ಲಿ ನಾವು ಗೆಲ್ಲುವುದು ನಿಶ್ಚಿತ. ಹಿಂದೂಗಳಿಗೆ ನ್ಯಾಯ ಕೊಡಿಸಿ ಅವರ ಹಕ್ಕನ್ನು ರಕ್ಷಿಸುತ್ತೇವೆ ಎಂದು ಆರ್.ಅಶೋಕ್ ಇದೇ ವೇಳೆ ಸವಾಲೆಸೆದರು.

ಪೊಲೀಸರ ಕ್ಷಮೆ ಕೋರಿದ ಅಶೋಕ್:
ಫ್ರೀಡಂ ಪಾರ್ಕ್ ಬಳಿ ಬಂಧಿಸಲು ಬಂದಿದ್ದ ಪೊಲೀಸರಿಗೆ ಆವಾಜ್ ಹಾಕಿದ್ದ ಆರ್.ಅಶೋಕ್, ಆನಂತರ ಅವರ ಕ್ಷಮೆ ಕೋರಿದ್ದಾರೆ. ಪ್ರತಿಭಟನೆ ವೇಳೆ ನಮ್ಮಿಂದ ನಿಮಗೆ ತೊಂದರೆಯಾಗಿದ್ದರೆ ಕ್ಷಮಿಸಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದಕ್ಕೂ ಮುಂಚೆ ಪೊಲೀಸರು ಮಾಜಿ ಉಪಮುಖ್ಯಮಂತ್ರಿ ಅಶೋಕ್ ಮತ್ತಿತರರನ್ನು ಬಂಧಿಸಿ ಸಿಎಆರ್ ಗ್ರೌಂಡ್ಸ್'ಗೆ ಕರೆದುಕೊಂಡು ಹೋಗಿದ್ದರು. ಆನಂತರ, ಎಲ್ಲರನ್ನೂ ಬಿಡುಗಡೆ ಮಾಡಿ ಕಳುಹಿಸಿದರು.