Asianet Suvarna News Asianet Suvarna News

ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ : ಈ ಪದ್ಧತಿ ಯಾವಾಗಿನಿಂದ ಶುರು ಗೊತ್ತಾ ?

ಸಂಪ್ರದಾಯದಂತೆ ಚಿಕ್ಕಮೇದೂರಿನ ಮೌಲ್ವಿ ರಥದ ಮುಂದೆ ಕುರಾನ್ ಗ್ರಂಥದ ಕೆಲವು ಸಾಲುಗಳನ್ನು ಪಠಿಸಿದರು. ನಂತರ ಭಕ್ತರ ಘೋಷದ ನಡುವೆ 11.15ಕ್ಕೆ ರಥವನ್ನು ಮೂಲಸ್ಥಾನದಿಂದ ಎಳೆದು ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾಯಿತು.

Quran recitation at Beluru Rathatsava

ಬೇಲೂರು(ಮಾ.30): ಶಿಲ್ಪಕಲೆಗಳ ತವರೂರು ವಿಶ್ವವಿಖ್ಯಾತ ಬೇಲೂರು ಚೆನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತರ ವೇದಘೋಷ ಹಾಗೂ ಜೈಕಾರದ ನಡುವೆ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಉತ್ಸವ ಮೂರ್ತಿಯನ್ನು ಅಲಂಕೃತ ದಿವ್ಯ ರಥದಲ್ಲಿರಿಸಲಾಯಿತು. ಬಳಿಕ ಪೂಜೆ ಸಲ್ಲಿಸಿ, ಬಾಳೆಕಂದನ್ನು ಕತ್ತರಿಸಿ ಬಲಿಯನ್ನು ಕೊಡಲಾಯಿತು. ಸಂಪ್ರದಾಯದಂತೆ ಚಿಕ್ಕಮೇದೂರಿನ ಮೌಲ್ವಿ ರಥದ ಮುಂದೆ ಕುರಾನ್ ಗ್ರಂಥದ ಕೆಲವು ಸಾಲುಗಳನ್ನು ಪಠಿಸಿದರು. ನಂತರ ಭಕ್ತರ ಘೋಷದ ನಡುವೆ 11.15ಕ್ಕೆ ರಥವನ್ನು ಮೂಲಸ್ಥಾನದಿಂದ ಎಳೆದು ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾಯಿತು. ಈ ವೇಳೆ ಭಕ್ತರು ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿ ಮೆರೆದರು.

ಇದಕ್ಕೂ ಮೊದಲು 7ನೇ ದಿನದ ಬ್ರಹ್ಮರಥೋತ್ಸವದ ಪ್ರಯುಕ್ತ ಬೆಳಿಗ್ಗೆ ಸುಪ್ರಭಾತ ಪೂಜೆಯೊಂದಿಗೆ ವಿಜೃಂಭಣೆಯಿಂದ ಯಾಗಶಾಲೆಯಲ್ಲಿನ ಹೋಮಕಾರ್ಯಗಳನ್ನು ಕೈಗೊಳ್ಳಲಾಯಿತು. ನಂತರ ದಿವ್ಯರಥಕ್ಕೆ ಪೂಜೆ ಸಲ್ಲಿಸಿ ಬಲಿ ಅನ್ನವನ್ನು ನಾಲ್ಕು ಚಕ್ರಗಳಿಗೂ ಸಮರ್ಪಿಸಲಾಯಿತು. ನಂತರ ಬಲಿಪ್ರದಾನ ನೆರವೇರಿಸಿ ಉತ್ಸವ ಮೂರ್ತಿಯನ್ನು ಕೃಷ್ಣಾಗಂಧೋತ್ಸವ ದೊಂದಿಗೆ ೮ ಬೀದಿಯಲ್ಲಿ ಮೆರವಣಿಗೆ ನಡೆಸಿ ಕೇಸರಿ ಮಂಟಪ ಪೂಜೆಯೊಂದಿಗೆ 11 ಗಂಟೆಗೆ ದಿವ್ಯರಥದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಏ.1ರ ಭಾನುವಾರ ಹಗಲು ನಾಡ ರಥೋತ್ಸವ ನಡೆಯಲಿದ್ದು ರಥವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಿ ಮತ್ತೆ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಗುವುದು. ಬ್ರಹ್ಮ ರಥೋತ್ಸವ ನಿಲ್ಲುವ ಸ್ಥಳವು ವಿಷ್ಣುವು ಮೋಹಿನಿ ಅವತಾರ ತಳೆದು ಭಸ್ಮಾಸುರನ್ನು ಕೊಂದ ಸ್ಥಳ ಎಂಬ ಪ್ರತೀತಿ ಇದೆ.

ಕುರಾನ್ ಪಠಣವೇಕೆ?

ಹೊಯ್ಸಳರ ಆಳ್ವಿಕೆ ಕಾಲದಲ್ಲಿ ತಮ್ಮ ರಾಜ್ಯದಲ್ಲಿ ಕ್ಷಾಮ ಆವರಿಸಿದ್ದರಿಂದ ಆಗಿನ ಅರಸರು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರಿಗೆ ಜಮೀನನ್ನು ಕೊಡುಗೆಯಾಗಿ ನೀಡಿದ್ದರು. ಆಗ ಕ್ಷಾಮ ನಿವಾರಣೆಯಾಗಿತ್ತು ಎಂಬ ಪ್ರತೀತಿ ಇದೆ. ಅಂದಿನಿಂದ ಎಲ್ಲ ಸಮುದಾಯಗಳ ಸಾಮರಸ್ಯಕ್ಕಾಗಿ ವಿಷ್ಣುವಿನ ಮುಂದೆ ಶಾಂತಿಗಾಗಿ ಪ್ರಾರ್ಥಿಸಿ ಪ್ರತಿ ವರ್ಷ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವದ ವೇಳೆ ಕುರಾನ್ ಪಠಿಸಲಾಗುತ್ತದೆ. ಈ ಸಂಪ್ರದಾಯ ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನಲಾಗಿದೆ.

Follow Us:
Download App:
  • android
  • ios