Asianet Suvarna News Asianet Suvarna News

6ರಿಂದ 10ನೇ ಕ್ಲಾಸ್‌ ಪುಸ್ತಕದಲ್ಲಿ ಕ್ಯೂ ಆರ್‌ ಕೋಡ್‌

 ಕೆಲ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್‌ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಆ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಇನ್ನು ಮುಂದೆ ಆ್ಯಪ್‌ ಮೂಲಕವೂ ವಿದ್ಯಾರ್ಥಿಗಳಿಗೆ ಸಿಗಲಿದೆ.

QR Code In 6 to 10 standard Textbook
Author
Bengaluru, First Published Oct 27, 2018, 10:04 AM IST
  • Facebook
  • Twitter
  • Whatsapp

ಬೆಂಗಳೂರು :  ಕೆಲ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್‌ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಆ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಇನ್ನು ಮುಂದೆ ಆ್ಯಪ್‌ ಮೂಲಕವೂ ವಿದ್ಯಾರ್ಥಿಗಳಿಗೆ ಸಿಗಲಿದೆ. ಕರ್ನಾಟಕ ಪಠ್ಯಪುಸ್ತಕ ಸಂಘವು 2019-20ನೇ ಸಾಲಿನಿಂದ ಮುದ್ರಿಸುವ ಪಠ್ಯಪುಸ್ತಕಗಳಲ್ಲಿ ಕ್ಯೂಆರ್‌ (ಕ್ವಿಕ್‌ ರೆಸ್ಪಾನ್ಸ್‌) ಕೋಡ್‌ ಮೂಲಕ ವಿದ್ಯಾರ್ಥಿಗಳು ಇಂತಹ ಮಾಹಿತಿಯನ್ನು ಪಡೆಯಬಹುದಾಗಿದೆ.

ಕ್ಯೂಆರ್‌ ಕೋಡ್‌ ಬಳಸಿ ಪಾಠಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಮತ್ತು ಪಠ್ಯಪುಸ್ತಕಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಸ್ನೇಹಿಯಾಗಿ ಮಾಡುವುದಕ್ಕಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಂಸ್ಥೆಯು 6ರಿಂದ 10ನೇ ತರಗತಿಯ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್‌ ಪಠ್ಯಪುಸ್ತಕಗಳ ಪ್ರತಿ ಪಾಠಗಳಲ್ಲಿ ಬಾರ್‌ ಕೋಡ್‌ ಮಾದರಿಯಲ್ಲಿ ಕ್ಯೂಆರ್‌ ಕೋಡ್‌ಗಳನ್ನು ಮುದ್ರಿಸುತ್ತಿದೆ.

ಏನಿದು ಕ್ಯೂಆರ್‌ ಕೋಡ್‌?:

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದಡಿ ಕಳೆದ ವರ್ಷ ಶಿಕ್ಷಕರ ದಿನಾಚರಣೆಯಂದು ದೀಕ್ಷಾ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಪುಸ್ತಕದಲ್ಲಿರುವ ಕೋಡ್‌ ಸ್ಕಾ್ಯನ್‌ ಮಾಡಿದರೆ, ಆ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳ ಲಿಂಕ್‌ಗಳು ತೆರೆದುಕೊಳ್ಳಲಿವೆ.

ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಮತ್ತು ನಿಗದಿತ ಪಾಠಕ್ಕೆ ಹೆಚ್ಚಿನ ಮಾಹಿತಿಗಳನ್ನು ಲಿಂಕ್‌ನಲ್ಲಿ ನೀಡಲಾಗಿರುತ್ತದೆ. ಧ್ವನಿ ಮತ್ತು ಮುದ್ರಣ ಎರಡೂ ಮಾದರಿಯಲ್ಲಿ ಮಾಹಿತಿಗಳು ಲಭ್ಯವಾಗಲಿವೆ. ಶಿಕ್ಷಕರು ಈ ಮಾಹಿತಿಗಳನ್ನು ಮೊಬೈಲ್‌, ಡೆಸ್ಕ್‌ಟಾಪ್‌ ಅಥವಾ ಪರದೆ (ಪ್ರೊಜೆಕ್ಟರ್‌) ಬಳಸಿ ಪಡೆಯಬಹುದು. ವಿದ್ಯಾರ್ಥಿಗಳು ಕೂಡ ತಮ್ಮ ಮನೆಗಳಲ್ಲಿ ದೀಕ್ಷಾ ಆ್ಯಪ್‌ ಮೂಲಕ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಉತ್ತರಗಳನ್ನು ತಿಳಿಯಬಹುದು. ನೇರವಾಗಿ ಪ್ರಶ್ನೋತ್ತರಗಳನ್ನು ನೀಡಿದ್ದು, ಉತ್ತರಗಳನ್ನು ತಿಳಿಯಲು ಅನುಕೂಲವಾಗಲಿದೆ.

ಉಪಯೋಗವೇನು?:

6, 9 ಮತ್ತು 10ನೇ ತರಗತಿ ಪಾಠಗಳು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಾಗಿದ್ದು, ಪಾಠಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ವಿವಿಧ ರಾಜ್ಯಗಳ ಶಿಕ್ಷಕರು ಕೂಡ ದೀಕ್ಷಾ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿರುತ್ತಾರೆ. ಬೋಧನಾ ಅವಧಿಯಲ್ಲಿ ವಿಶ್ಲೇಷಣೆಗೆ ಈ ಮಾಹಿತಿಗಳನ್ನು ಬಳಸಿಕೊಳ್ಳಬಹುದು.

ಜತೆಗೆ ಪ್ರತಿ ಶಿಕ್ಷಕರಿಗೆ ಲಾಗಿನ್‌ ಐಡಿ ನೀಡಲಾಗುತ್ತಿದ್ದು, ಮಾದರಿ ವಿಷಯಗಳನ್ನು ರಾಜ್ಯದ ಶಿಕ್ಷಕರು ಕೂಡ ಅಪ್‌ಲೋಡ್‌ ಮಾಡಲು ಅವಕಾಶವಿದೆ. ಕ್ಯೂಆರ್‌ ಕೋಡ್‌ ಅನ್ನು ಈಗಾಗಲೇ ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಅಳವಡಿಸಿಕೊಂಡಿವೆ.

ಆರಂಭದಲ್ಲಿ ಎರಡು ಭಾಷೆಗಳಲ್ಲಿ ಲಭ್ಯ:

ಕರ್ನಾಟಕ ಪಠ್ಯಪುಸ್ತಕ ಸಂಘವು ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಉರ್ದು ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಪ್ರಕಟಿಸುತ್ತಿದೆ. ಆರಂಭಿಕ ಹಂತದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡು ಭಾಷೆಗಳಲ್ಲಿ ಮಾತ್ರ ಕ್ಯೂಆರ್‌ ಕೋಡ್‌ ಬಳಸಲು ನಿರ್ಧರಿಸಿದೆ.

ನಂತರದ ವರ್ಷಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ. ದೇಶಾದ್ಯಂತ ಸದ್ಯ ದೀಕ್ಷಾ ಆಪ್‌ 10 ಭಾಷೆಗಳಲ್ಲಿ ಲಭ್ಯವಿದ್ದು, ಆಫ್‌ಲೈನ್‌ ಹಾಗೂ ಆನ್‌ಲೈನ್‌ ಮೂಲಕವೂ ಈ ಮಾಹಿತಿ ಪಡೆಯಬಹುದು ಎಂದು ಡಿಎಸ್‌ಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

30ಕ್ಕೂ ಹೆಚ್ಚಿನ ಎನ್‌ಜಿಒಗಳು ಸಾಥ್‌;

ಅಜೀಂ ಪ್ರೇಮ್‌ಜಿ ಫೌಂಡೇಷನ್‌, ಬ್ರಿಟಿಷ್‌ ಕೌನ್ಸಿಲ್‌, ವಿಕ್ರಂ ಸಾರಾಭಾಯ್‌ ಕಮಿಟಿ ಸೈನ್ಸ್‌ ಸೇರಿದಂತೆ ಅಂದಾಜು 30ಕ್ಕೂ ಹೆಚ್ಚಿನ ಸರ್ಕಾರೇತರ ಸಂಸ್ಥೆಗಳು ಈ ಯೋಜನೆಗೆ ಕೈಜೋಡಿಸಿವೆ. ದೀಕ್ಷಾ ಆ್ಯಪ್‌ನಲ್ಲಿ ಶೈಕ್ಷಣಿಕ ಮಾಹಿತಿಗಳನ್ನು ಅಪ್‌ಲೋಡ್‌ ಮಾಡುವುದಕ್ಕೆ ಸಹಕಾರ ನೀಡಿವೆ.

ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಅಪ್‌ಗ್ರೇಡ್‌ ಮಾಡಲಾಗುತ್ತಿದೆ. ಪಾಠಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಕ್ಯೂಆರ್‌ ಕೋಡ್‌ ಮುದ್ರಣ ಮಾಡಲಾಗುತ್ತಿದೆ.

- ಎಚ್‌.ಎನ್‌.ಗೋಪಾಲಕೃಷ್ಣ, ನಿರ್ದೇಶಕರು, ಡಿಎಸ್‌ಇಆರ್‌ಟಿ

ವರದಿ : ಎನ್‌.ಎಲ್‌. ಶಿವಮಾದು

Follow Us:
Download App:
  • android
  • ios