ಬ್ಯುನಸ್ ಏರ್ಸ್(ಡಿ.01): 'ಗೆಳೆಯ ಮತ್ತೆ ಸಿಗ್ತಿವೋ ಇಲ್ವೋ, ಅದಕ್ಕೆ ಹಿಂದೆ ಯಾರೂ ಹೇಳಿರ್ಬಾದು, ಮುಂದೆಯೂ ಯಾರೂ ಹೇಳ್ಬಾರ್ದು ಹಂಗೊಂದು ಹಾಯ್ ಹೇಳಿ ಬಿಡೋಣ..' ಇದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೌದಿ ಅರೇಬಿಯಾ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಪರಸ್ಪರ ಶುಭ ಕೋರಿದ ರೀತಿಗೆ ಕೊಡಬಹುದಾದ ಟ್ಯಾಗ್‌ಲೈನ್.

ಹೌದು, ಅರ್ಜೆಂಟಿನಾದಲ್ಲಿ ನಡೆಯುತ್ತಿರುವ ಜಿ-20 ಸಮ್ಮೇಳನದಲ್ಲಿ ಪರಸ್ಪರ ಎದುರಾದ ಪುಟಿನ್ ಮತ್ತು ಸಲ್ಮಾನ್, ಪರಸ್ಪರ ಹಾಯ್ ಹೇಳಿದ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಜಿ-20 ಸಮ್ಮೇಳನದಲ್ಲಿ ಭಾಗವಹಿಸಿದ್ದ ಇಬ್ಬರೂ ನಾಯಕರು ಹೈ-ಫೈ ನೀಡುವ ಮೂಲಕ ಪರಸ್ಪರ ಶುಭ ಕೋರಿದ್ದಾರೆ. ಕೆಲವು ಸೆಕೆಂಡ್‌ಗಳ ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಮ್ಮ ಪಾಲಿಗೆ ನಾಳೆ ಮತ್ತೆ ಬರುವುದೇ ಇಲ್ಲವೇನೋ ಎಂಬಂತೆ ಈ ನಾಯಕರು ಹೈ-ಫೈ ನೀಡಿರುವುದು ಟ್ರೋಲ್ ಗೆ ಒಳಗಾಗಿದೆ.

ಸಾಮಾನ್ಯವಾಗಿ ಜಿ-20 ಅಂತಹ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ವಿವಿಧ ರಾಷ್ಟ್ರಗಳ ಮುಖ್ಯಸ್ಥರು, ಅತ್ಯಂತ ಗಾಂಭೀರ್ಯದಿಂದ ಪರಸ್ಪರರನ್ನು ಎದುರುಗೊಳ್ಳುತ್ತಾರೆ. ಪರಸ್ಪರರ ನಡುವೆ ಆತ್ಮೀಯತೆ ಇದ್ದರೂ, ಜಿ-20 ವೇದಿಕೆಯಲ್ಲಿ ಶಿಸ್ತು ಪ್ರದರ್ಶನ ಅನಿವಾರ್ಯ.

ಆದರೆ ಪುಟಿನ್ ಮತ್ತು ಸಲ್ಮಾನ್ ಈ ಪ್ರೋಟೋಕಾಲ್ ಮುರಿದು ಅತ್ಯಂತ ಆತ್ಮೀಯವಾಗಿ ಭೇಟಿಯಾಗಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಸೌದಿ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಮೇಲೆ ಪತ್ರಕರ್ತ ಜಮಾಲ್ ಖಷೋಗ್ಗಿ ಕೊಲೆ ಆರೋಪ ಕೇಳಿ ಬಂದಿದ್ದರೆ, ರಷ್ಯಾದಲ್ಲಿ ಅಶಾಂತಿ ತಾಂಡವವಾಡಲು ಪುಟಿನ್ ಆಡಳಿತದ ವೈಖರಿಯೇ ಕಾರಣ ಎಂಬ ಆರೋಪವೂ ಇದೆ.