ಕೋರ್ಟ್ ರೂಮ್'ಗೆ ನುಗ್ಗಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ರೀತಿಯು ಸರಿಯಲ್ಲ ಎಂದು ವಿಪಕ್ಷ ನಾಯಕ ರಮೇಶ್ ಚೆನ್ನಿತಾಲ ಸೇರಿದಂತೆ ಬಹಳಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಕೊಚ್ಚಿ(ಫೆ. 23): ಬಹುಭಾಷಾ ನಟಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿಗಳಾದ ಪಲ್ಸರ್ ಸುನೀ ಮತ್ತು ವಿಪಿ ವಿಜೀಶ್ ಬಂಧನವಾಗಿದೆ. ಅದರೆ, ಇವರಿಬ್ಬರ ಅರೆಸ್ಟ್ ಆಗುವ ಮುನ್ನ ಎರ್ನಾಕುಲಂನ ಮ್ಯಾಜಿಸ್ಟ್ರೇಟ್ ಕೋರ್ಟ್'ನಲ್ಲಿ ಹೈಡ್ರಾಮಾವೇ ನಡೆದುಹೋಯಿತು. ನ್ಯಾಯಾಲಯದಲ್ಲಿ ಶರಣಾಗಲು ಬಂದ ಆರೋಪಿಗಳನ್ನು ಪೊಲೀಸರು ಬಂಧಿಸಿದ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಏನಾಯಿತು?
ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಪಲ್ಸರ್ ಸುನೀ ಮತ್ತು ವಿಪಿ ವಿಜೀಶ್ ಅವರು ಶರಣಾಗುವ ಉದ್ದೇಶದಿಂದ ಎರ್ನಾಕುಲಂನ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆಗಮಿಸುತ್ತಾರೆ. ಆದರೆ, ಆ ಸಮಯದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಕೋರ್ಟ್ ಹಾಲ್'ನಲ್ಲಿರದೇ ಊಟಕ್ಕೆ ಹೋಗಿರುತ್ತಾರೆ. ಇದೇ ವೇಳೆ, ಮಫ್ತಿಯಲ್ಲಿದ್ದ ಪೊಲೀಸರು ಆರೋಪಿಗಳನ್ನು ಹಿಡಿಯುತ್ತಾರೆ. ಸಾರ್ವಜನಿಕರ ಕಣ್ಮುಂದೆಯೇ ಆರೋಪಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದರೆನ್ನಲಾಗಿದೆ. ನಂತರ, ವಿಚಾರಣೆಗಾಗಿ ಅವರನ್ನು ಅಲುವಾ ಪೊಲೀಸ್ ಕ್ಲಬ್'ಗೆ ಕರೆದೊಯ್ಯಲಾಗುತ್ತದೆ.
ಆರೋಪಿಗಳನ್ನು ಪೊಲೀಸರು ನಡೆಸಿಕೊಂಡ ರೀತಿಯು ವ್ಯಾಪಕ ಟೀಕೆಗೆ ಒಳಗಾಗಿದೆ. ಕೋರ್ಟ್ ರೂಮ್'ಗೆ ನುಗ್ಗಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ರೀತಿಯು ಸರಿಯಲ್ಲ ಎಂದು ವಿಪಕ್ಷ ನಾಯಕ ರಮೇಶ್ ಚೆನ್ನಿತಾಲ ಸೇರಿದಂತೆ ಬಹಳಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಪೊಲೀಸರ ಕ್ರಮವನ್ನು ಕೇರಳ ಸರಕಾರ ಸಮರ್ಥಿಸಿಕೊಂಡಿದೆ. ಕೇರಳ ಸಿಎಂ ಪಿನಾರಯಿ ವಿಜಯನ್ ಅವರು ಪೊಲೀಸರಿಗೆ ಶಹಬ್ಬಾಸ್'ಗಿರಿ ನೀಡಿದ್ದಾರೆ.
ಇದೇ ವೇಳೆ, ಪಲ್ಸರ್ ಸುನೀ ಕೊಚ್ಚಿಯ ಮನೆಯೊಂದಕ್ಕೆ ಹೋಗಿ ಬರುವ ಸಿಸಿಟಿವಿ ದೃಶ್ಯವೊಂದು ಪೊಲೀಸರಿಗೆ ಲಭಿಸಿದೆ. ವಿಡಿಯೋ ದೃಶ್ಯದ ಪ್ರಕಾರ, ನಟಿಯ ಮೇಲೆ ಲೈಂಗಿಕ ಕಿರುಕುಳ ನಡೆದ ಕೆಲವೇ ಹೊತ್ತಿನಲ್ಲಿ ಕೊಚ್ಚಿಯ ಮನೆಯೊಂದರ ಕಾಂಪೌಂಡ್ ಹತ್ತಿ ಪಲ್ಸರ್ ಸುನೀ ಒಳಗೆ ಪ್ರವೇಶಿಸುತ್ತಾನೆ. ಸುಮಾರು 20 ನಿಮಿಷಗಳ ಬಳಿಕ ಆ ಮನೆಯಿಂದ ಆತ ಹೊರಹೋಗುತ್ತಾನೆ. ಆ ಮನೆಗೂ ಪಲ್ಸರ್ ಸುನೀಗೂ ಹಾಗೂ ನಟಿ ಕಿರುಕುಳದ ಘಟನೆಗೂ ಸಂಬಂಧವಿರುವುದು ಈ ದೃಶ್ಯದಿಂದ ಮೇಲ್ನೋಟಕ್ಕೆ ತಿಳಿದುಬರುತ್ತದೆ.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ನಾಯಕನಟಿಯಾಗಿರುವ ಮಲಯಾಳಿ ಮೂಲದ ನಟಿಯೊಬ್ಬರ ಮೇಲೆ ಆರು ದಿನಗಳ ಹಿಂದೆ ಲೈಂಗಿಕ ಕಿರುಕುಳವಾಗಿದೆ. ಶೂಟಿಂಗ್ ಮುಗಿಸಿ ತ್ರಿಶೂರ್'ನಿಂದ ಕೊಚ್ಚಿಗೆ ಹೋಗುವಾಗ ಪಲ್ಸರ್ ಸುನೀ ಮತ್ತವರ ಗ್ಯಾಂಗ್ ಅಡ್ಡಗಟ್ಟಿ ಕಾರಿನೊಳಗೆ 2-3 ಗಂಟೆ ಹಿಂಸೆ ನೀಡಿದ್ದಾರೆ. ಈ ಬಗ್ಗೆ ನಟಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
