ಬೆಂಗಳೂರು :  ಏರೋ ಇಂಡಿಯಾ’ ಪ್ರದರ್ಶನದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ, ವಸ್ತು ಪ್ರದರ್ಶನಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಫೆ23 ಪ್ರವೇಶಾವಕಾಶ ಲಭ್ಯವಾಗಲಿದೆ. ಹೀಗಾಗಿ  ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಲಕ್ಷಾಂತರ ಮಂದಿಗೆ ನಾಗರಿಕರು ಒಮ್ಮೆಲೇ ವೈಮಾನಿಕ ಪ್ರದರ್ಶನಕ್ಕೆ ಲಗ್ಗೆ ಇಡಲಿದ್ದಾರೆ. ಹೀಗಾಗಿ ವೈಮಾನಿಕ ಪ್ರದರ್ಶನಕ್ಕೆ ಆಗಮಿಸುವವರಿಗೆ ಕೆಲ ಸಿದ್ಧತೆಗಳ ಅಗತ್ಯವಿದೆ. 

ಕಳೆದ ಆವೃತ್ತಿಯಲ್ಲಿ 1.60 ಲಕ್ಷ ಮಂದಿ ನಾಗರಿಕರು ವೈಮಾನಿಕ ಹಾಗೂ ವಸ್ತು ಪ್ರದರ್ಶನ ಕಣ್ತುಂಬಿಕೊಂಡಿದ್ದರೆ, ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಐದು ದಿನಗಳ ಕಾಲ 5.5 ಲಕ್ಷ ಜನರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.  

ಅತಿ ನಿರೀಕ್ಷೆ ಬೇಡ: ಸಾರಂಗ್ ಹೆಲಿಕಾಪ್ಟರ್ ತಂಡ ಹಾಗೂ ಯಕೊವ್ಲೆವ್ಸ್ ನಾಲ್ಕು ವಿಮಾನಗಳ ತಂಡ ಬಿಟ್ಟು  ಯಾವುದೇ ಫಾರ್ಮೇಷನ್ ತಂಡವೂ ಪ್ರದರ್ಶನ ನೀಡುತ್ತಿಲ್ಲ. ಉಳಿದಂತೆ, ಎಲ್‌ಸಿಎ ತೇಜಸ್, ರಫೇಲ್, ಸುಖೋಯ್ 30 ಎಂಕೆಐ, ಜಾಗ್ವಾರ್ ಡೇರಿನ್ -3, ಎಚ್‌ಎಎಲ್‌ನ ಹೆಲಿಕಾಪ್ಟರ್‌ಗಳು ಹಾಗೂ ಸೈನಿಕರ ಸಾಹಸಗಳು ಗಮನ ಸೆಳೆಯುತ್ತಿವೆ. ಇರುವ ವೈಮಾನಿಕ ಪ್ರದರ್ಶನಗಳನ್ನಷ್ಟೇ ಖುಷಿಯಿಂದ ನೋಡಲು
ಸಿದ್ಧರಾಗಿ ಬನ್ನಿ.

ಆಕರ್ಷಕ ತಂಡಗಳು ಮಿಸ್:  2015 ನೇ ಆವೃತ್ತಿಯಲ್ಲಿ ಸಾರ್ವಜನಿಕರನ್ನು ಆಕರ್ಷಿಸಿದ್ದ ಸ್ಕ್ಯಾಂಡೇವಿಯನ್ ಸ್ಕೈ ಕ್ಯಾಟ್ಸ್, ಬ್ರಿಟ್ಲಿಂಗ್ ವಿಂಗ್ ವಾಕರ್ಸ್, ರೆಡ್‌ಬುಲ್ಸ್ ತಂಡಗಳ ಪ್ರದರ್ಶನ ವೈಮಾನಿಕ ಪ್ರದರ್ಶನದಲ್ಲಿ ಇಲ್ಲ. ಆಗಸದಲ್ಲಿ ವೇಗವಾಗಿ ಹಾರುವ ವಿಮಾನದ ರೆಕ್ಕೆಗಳ ಮೇಲೆ ನಡೆಯುವ ಸ್ಕ್ಯಾಂಡೇವಿಯನ್ ಸ್ಕೈ ಕ್ಯಾಟ್ಸ್ ತಂಡದ ಸದಸ್ಯರು, ಕೌಶಲ್ಯ ತೋರುತ್ತಿರುವ ವಿಮಾನಗಳ ಮೇಲೆ ನಡೆದಾಡಿ, ಪಲ್ಟಿ ಹೊಡೆಯುವ ಬ್ರಿಟ್ಲಿಂಗ್ ಸ್ಕೈವಾಕರ್ಸ್ ತಂಡಗಳು ವಿವಿಧ ವಿನ್ಯಾಸ, ರೆಡ್‌ಬುಲ್‌ನ ಹೃದಯ ಅರಳಿಸುವ ಕಲೆ ಇಲ್ಲಿರಲ್ಲ.


ಹೀಗೆ ಟಿಕೆಟ್ ಪಡೆಯಿರಿ

ಭಾರತೀಯ ಪ್ರಜೆಗಳು ಬುಕ್ ಮೈ ಶೋ ಅಥವಾ ಏರೋ ಇಂಡಿಯಾ ವೆಬ್‌ಸೈಟ್‌ನಲ್ಲಿ ಟಿಕೆಟ್ ಖರೀದಿ ಮಾಡಬಹುದು. ಕನ್ಫರ್ಮ್ ಆದ ಟಿಕೆಟ್ ಪ್ರಿಂಟೌಟ್ ಪಡೆದು ಏರ್‌ಶೋಗೆ ಹೋಗಬಹುದು. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಕೇಳಿದಾಗಲೆಲ್ಲಾ ಬಾರ್ ಕೋಡ್ ಸಹಿತ ಇರುವ ಟಿಕೆಟ್ ಹಾಗೂ ಟಿಕೆಟ್ ಬುಕ್ಕಿಂಗ್ ವೇಳೆ ನಮೂದಿಸಿದ ಸರ್ಕಾರಿ ಗುರುತಿನ ಚೀಟಿ ತೋರಿಸಿ ಒಳಗೆ ಹೋಗಬಹುದು.

ಟಿಕೆಟ್ ದರ

ಸಾಮಾನ್ಯ ವೀಕ್ಷಣೆ (ವೈಮಾನಿಕ ಪ್ರದರ್ಶನ ಸ್ಥಳ ಮಾತ್ರ, ಆನ್‌ಲೈನಲ್ಲಿ)- 600 

ವೈಮಾನಿಕ ಪ್ರದರ್ಶನ ಹಾಗೂ ವಸ್ತು ಪ್ರದರ್ಶನ ವೀಕ್ಷಣೆ- 1,800 

5 ವರ್ಷದೊಳಗಿನ ಮಕ್ಕಳಿಗೆ ಉಚಿತ

ಪ್ರವೇಶ 

ಪ್ರವೇಶದ ಗೇಟ್ ಸಂಖ್ಯೆ
ಸಾಮಾನ್ಯ ವೀಕ್ಷಕರಿಗೆ- ಗೇಟ್ ಸಂಖ್ಯೆ  8,9,10 ಮತ್ತು 11
1,800 ಟಿಕೆಟ್‌ಗೆ ಗೇಟ್ ಸಂಖ್ಯೆ 5 

ಪಾರ್ಕಿಂಗ್, ನಿಖರ ಮಾಹಿತಿಗೆ ಟಿಕೆಟ್ ಹಿಂದಿನ ಮಾಹಿತಿ ನೋಡಿ

ಉಚಿತ ವೈ-ಫೈ ಬಳಸಿಕೊಳ್ಳಿ
ಭಾಗಶಃ ಮೊಬೈಲ್ ನೆಟ್‌ವರ್ಕ್ ಕೆಲಸ ಮಾಡಲ್ಲ. ಹೀಗಾಗಿ ತುರ್ತು ಸಂಪರ್ಕಕ್ಕಾಗಿ ಏರ್‌ಶೋ ಉಚಿತ ‘ವೈ-ಫೈ’ ಬಳಸಿಕೊಳ್ಳಿ

ವರದಿ : ವಿಶ್ವನಾಥ ಮಲೆಬೆನ್ನೂರು