ಬೆಂಗಳೂರು (ಏ. 30): ದ್ವಿತೀಯ ಪಿಯುಸಿ ಅನುತ್ತೀರ್ಣರಾದ ಹಾಗೂ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸ್ಕ್ಯಾನಿಂಗ್ ಪ್ರತಿ ವಿತರಣೆಗೆ ವಿಳಂಬವಾಗುತ್ತಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ.

ರಾಜ್ಯಾದ್ಯಂತ ಸುಮಾರು 81 ಸಾವಿರ ವಿದ್ಯಾರ್ಥಿಗಳು ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈವರೆಗೂ ಸುಮಾರು 57 ಸಾವಿರ ವಿದ್ಯಾರ್ಥಿಗಳಿಗೆ ಸ್ಕ್ಯಾನಿಂಗ್ ಪ್ರತಿ ಒದಗಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಇನ್ನೂ ಸ್ಕ್ಯಾನಿಂಗ್ ಪ್ರತಿ ದೊರೆತಿಲ್ಲ. ಮೌಲ್ಯಮಾಪಕರು ತಮಗೆ ನೀಡಿರುವ ಅಂಕಗಳ ಬಗ್ಗೆ ಅನುಮಾನವಿದ್ದವರು ಹಾಗೂ ಹೆಚ್ಚಿನ ಅಂಕ ನಿರೀಕ್ಷೆ ಹೊಂದಿರುವ ವಿದ್ಯಾರ್ಥಿಗಳೇ ಹೆಚ್ಚಾಗಿ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಸ್ಕ್ಯಾನಿಂಗ್ ಪ್ರತಿ ದೊರೆತ ನಂತರ ಅಂಕ ನೀಡುವಿಕೆಯಲ್ಲಿ ವ್ಯತ್ಯಾಸವಾಗಿದ್ದರೆ ಸದರಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿಕೊಳ್ಳುವ ಬಯಕೆ ಹೊಂದಿರುತ್ತಾರೆ

ಆದರೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನ ಸಮೀಪಿಸುತ್ತಿದ್ದರೂ ಸ್ಕ್ಯಾನಿಂಗ್ ಪ್ರತಿ ದೊರೆಯದ ಕಾರಣ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ವಿದ್ಯಾರ್ಥಿ ಯೊಬ್ಬ, ನಾನು ಪಿಸಿಎಂಬಿ ಕಾಂಬಿನೇಷನ್ ಓದಿದ್ದೇನೆ. ಎಲ್ಲ ವಿಷಯಗಳಲ್ಲಿ 70 ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದಿದ್ದೇನೆ. ಗಣಿತದಲ್ಲಿ ಮಾತ್ರ 35 ಅಂಕ ಬಂದಿದೆ. ಸ್ಕ್ಯಾನಿಂಗ್ ಪ್ರತಿಗಾಗಿ ಏ.19 ರಂದು ಅರ್ಜಿ ಸಲ್ಲಿಸಿದ್ದೇನೆ. ಈ ವರೆಗೆ ಸ್ಕ್ಯಾನಿಂಗ್ ಪ್ರತಿ ದೊರೆತಿಲ್ಲ. ಮತ್ತೊಂದೆಡೆ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಆದರೆ, ಪಿಯು ಇಲಾಖೆ ವಿಳಂಬ ಮಾಡುತ್ತಿರುವುದರಿಂದ ನಿರಾಸೆ ಮೂಡಿದೆ ಎಂದು ಹೇಳಿದ್ದಾನೆ

ನಗರದ ಪ್ರಮುಖ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಸೀಟು ಗಿಟ್ಟಿಸಲು ಕನಿಷ್ಠ ಶೇ.90 ಅಂಕಗಳನ್ನು ಪಡೆಯಬೇಕು ಎನ್ನುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಕ್ಯಾನಿಂಗ್ ಪ್ರತಿ ವಿತರಣೆ ವಿಳಂಬದಿಂದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಅವಕಾಶ ತಪ್ಪಿದಂತಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಸ್ಕ್ಯಾನಿಂಗ್ ಪ್ರತಿಗಳನ್ನು ವಿತರಿಸಿದರೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾನೆ.

ಸ್ಕ್ಯಾನಿಂಗ್ ಪ್ರತಿ ವಿತರಣೆ ವಿಳಂಬವಾಗುತ್ತಿರುವ ಕುರಿತು ಮಾತನಾಡಿದ ಪೋಷಕರೊಬ್ಬರು, ತಮ್ಮ ಮಗ ವಿಜ್ಞಾನ ವಿಭಾಗದ ಎಲ್ಲ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾನೆ. ಭೌತಶಾಸ್ತ್ರದಲ್ಲಿ ಮಾತ್ರ ಅನುತ್ತೀರ್ಣನಾಗಿದ್ದಾನೆ. ಸ್ಕ್ಯಾನಿಂಗ್ ಪ್ರತಿಗೆ ಏ.22 ರಂದು ಅರ್ಜಿ ಸಲ್ಲಿಸಿದ್ದೇನೆ. ಈ ವರೆಗೆ ಸ್ಕ್ಯಾನಿಂಗ್ ಪ್ರತಿ ದೊರೆತಿಲ್ಲ. ಇದು ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹೆಚ್ಚಿಸಲಿದೆ ಎಂದು ಹೇಳಿದರು.

ವಿಳಂಬ ಮಾಡುತ್ತಿಲ್ಲ: ಈ ಕುರಿತು ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಆನ್‌ಲೈನ್ ಮೂಲಕ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಏ.29 ಕೊನೆಯ ದಿನವಾಗಿತ್ತು. ಮೇ 6 ರವರೆಗೂ ಸ್ಕ್ಯಾನಿಂಗ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಮೇ 8 ರ ವರೆಗೆ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಈವರೆಗೆ ಅಂದಾಜು 81 ಸಾವಿರ ವಿದ್ಯಾರ್ಥಿಗಳು ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 57 ಸಾವಿರ ಸ್ಕ್ಯಾನಿಂಗ್ ಪ್ರತಿ ನೀಡಲಾಗಿದೆ. ಯಾವುದೇ ರೀತಿಯಲ್ಲಿ ವಿಳಂಬ ಮಾಡುತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.