ಕಾಲೇಜ್‌'ಗೆ ಬೀಗ ಹಾಕುವ ಸಂದರ್ಭದಲ್ಲಿ ವಿದ್ಯಾರ್ಥಿನಿ ಒಳಗಡೆ ಇರುವುದನ್ನು ಗಮನಿಸದೆ ಸಿಬ್ಬಂದಿವರ್ಗ ಕೊಠಡಿಯ ಬೀಗ ಜಡಿದು ಹೋಗಿದ್ದಾರೆ.
ರಿಪ್ಪನ್'ಪೇಟೆ(ಅ.30): ವಿದ್ಯಾರ್ಥಿನಿಯೊಬ್ಬಳನ್ನು ತರಗತಿಯ ಕೊಠಡಿಯಲ್ಲೇ ಬಿಟ್ಟು ಬೀಗ ಜಡಿದು ಮನೆಗೆ ಹೋದ ಪ್ರಸಂಗ ಶನಿವಾರ ಸಮೀಪದ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್'ನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಕಿರುಚಾಡುತ್ತಿದ್ದನ್ನು ನೋಡಿದ ಮೂತ್ರ ವಿಸರ್ಜನೆಗೆ ನಿಲ್ಲಿಸಿದ್ದ ಕಾರಿನ ಪ್ರಯಾಣಿಕರು ತಕ್ಷಣ ಗ್ರಾಮಸ್ಥರ ಗಮನಕ್ಕೆ ತಂದು ನಿತ್ರಾಣಗೊಂಡಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.
ಕಲಾ ವಿಭಾಗ ಮೊದಲ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಎಂದಿನಂತೆ ಶನಿವಾರ ಬೆಳಗ್ಗೆ ಕಾಲೇಜ್'ಗೆ ಹೋಗಿದ್ದು ಎಲ್ಲರೊಂದಿಗೆ ಎಲ್ಲಾ ತರಗತಿಗಳಲ್ಲಿ ಹಾಜರಾಗಿ ಪಾಠ ಪ್ರವಚನ ಕೇಳಿದ್ದಳು. ಶನಿವಾರ ಅರ್ಧ ದಿನ ಶಾಲೆ ಕಾರಣ ಎಲ್ಲರೂ ತರಗತಿ ಮುಗಿಸಿಕೊಂಡು ಮನೆಗೆ ಮರಳಿದ್ದರೂ ಈ ವಿದ್ಯಾರ್ಥಿನಿ ನಾಲ್ಕು ಗಂಟೆಯಾದರೂ ಮನೆಗೆ ಮರಳದಿರುವುದನ್ನು ಕಂಡು ಪೋಷಕರು ಗಾಬರಿಗೊಂಡಿದ್ದರು. ಕಾಲೇಜ್'ಗೆ ಬೀಗ ಹಾಕುವ ಸಂದರ್ಭದಲ್ಲಿ ವಿದ್ಯಾರ್ಥಿನಿ ಒಳಗಡೆ ಇರುವುದನ್ನು ಗಮನಿಸದೆ ಸಿಬ್ಬಂದಿವರ್ಗ ಕೊಠಡಿಯ ಬೀಗ ಜಡಿದು ಹೋಗಿದ್ದಾರೆ.
ಸೌಮ್ಯ ಸ್ವಭಾವದ ವಿದ್ಯಾರ್ಥಿನಿ ಎಂದಿನಂತೆ ಮನೆಗೆ ಹೊರಡಲು ಅಣಿಯಾಗಿ ಬಾಗಿಲು ತೆರೆಯಲು ಬಂದಾಗ ಬೀಗ ಹಾಕಿರುವುದು ಕಂಡು ಸಹಾಯಕ್ಕಾಗಿ ಕೂಗಿದ್ದಾಳೆ. ಆ ವೇಳೆಗಾಗಲೇ ಕಾಲೇಜ್ ಆವರಣದಲ್ಲಿ ಯಾರು ಇಲ್ಲದೆ ಇದ್ದು ಸಹಾಯಕ್ಕಾಗಿ ಸತತವಾಗಿ ಕೂಗಾಟ ಚಿರಾಟ ನಡೆಸಿ ನಿತ್ರಾಣಗೊಂಡಿದ್ದಾಳೆ. ತೀರ್ಥಹಳ್ಳಿ-ಸಾಗರ ಮಾರ್ಗ ರಸ್ತೆಯ ಪಕ್ಕದಲ್ಲಿರುವ ಈ ಕಾಲೇಜ್ ಬಳಿಯ ಕಾಂಪೌಂಡ್ ಹತ್ತಿರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಮೂತ್ರವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದಾರೆ. ಆಗ ಯುವತಿಯ ಆಕ್ರಂದನ ಕೇಳಿ ಯುವಕರು ಅತ್ತ ಗಮನ ಹರಿಸಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.
ಕಾಲೇಜ್ನಲ್ಲಿ ಸಹಾಯಕ ಸಿಬ್ಬಂದಿ ಇಲ್ಲದಿರುವುದು ಮತ್ತು ಉಪನ್ಯಾಸಕರು ಕೇಂದ್ರಸ್ಥಾನದಲ್ಲಿರದೇ ದೂರ ದೂರುಗಳಿಂದ ಬರುವುದರಿಂದಾಗಿ ತಮ್ಮ ಕೆಲಸ ಮುಗಿಯುವ ಮುನ್ನವೇ ಕಾಲೇಜ್ ಬಿಟ್ಟು ಬಸ್'ಗಾಗಿ ಓಡುತ್ತಾರೆ. ನಂತರ ಶಾಲಾ ವಿದ್ಯಾರ್ಥಿಗಳೇ ಕೊಠಡಿ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಾರೆ. ಇದಕ್ಕೆಲ್ಲ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಬೇಜವಾಬ್ದಾರಿಯೇ ಕಾರಣವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
