ಭದ್ರತೆಗೆ ನಿಯೋಜಿಸಲಾಗಿದ್ದ 55 ವರ್ಷದ ಪಿಎಸ್'ಐ ವೆಂಕಟೇಶ್ ಮೂರ್ತಿ ಲೋ ಬಿಪಿ ಆಗಿ ತಲೆ ತಿರುಗಿ ಕೆಳಕ್ಕೆ ಬಿದ್ದಿದ್ದಾರೆನ್ನಲಾಗಿದೆ.
ಕೋಲಾರ(ನ. 28): ಕೇಂದ್ರ ಸರಕಾರದ ನೋಟ್ ನಿಷೇಧ ಕ್ರಮದ ವಿರುದ್ಧ ಇಂದು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಆಕ್ರೋಶ ದಿನ ಪ್ರತಿಭಟನೆಯ ವೇಳೆ ಕರ್ತವ್ಯನಿರತ ಪಿಎಸ್'ಐವೊಬ್ಬರು ಕುಸಿದುಬಿದ್ದಿರುವ ಘಟನೆ ಜಿಲ್ಲಾಧಿಕಾರಿ ಕಛೇರಿ ಬಳಿ ನಡೆದಿದೆ. ಭದ್ರತೆಗೆ ನಿಯೋಜಿಸಲಾಗಿದ್ದ 55 ವರ್ಷದ ಪಿಎಸ್'ಐ ವೆಂಕಟೇಶ್ ಮೂರ್ತಿ ಲೋ ಬಿಪಿ ಆಗಿ ತಲೆ ತಿರುಗಿ ಕೆಳಕ್ಕೆ ಬಿದ್ದಿದ್ದಾರೆನ್ನಲಾಗಿದೆ. ಈ ಪೊಲೀಸ್ ಅಧಿಕಾರಿಯನ್ನು ಸಮೀಪದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಂಗ್ರೆಸ್ಸಿಗರ ಆಕ್ರೋಶದ ದಿನ:
ಇಲ್ಲಿಯ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲೆ ಹಾಕಿ ಪ್ರತಿಭಟನೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮೆಕ್ಕೆ ವೃತ್ತದಲ್ಲಿ ಮೋದಿಯವರ ಭೂತದಹನ ಮಾಡಿ ತರಕಾರಿಯಿಂದ ಹೊಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ರಸ್ತೆಯಲ್ಲಿ ಹಸಿ ತರಕಾರಿಯನ್ನು ಚೆಲ್ಲಿ ಕಾಲಿನಿಂದ ತುಳಿದು ಪ್ರಧಾನ ಮಂತ್ರಿ ಮೋದಿಯವರ ಭೂತದಹನ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ಇನ್ನು, ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರದ ನೀತಿಯನ್ನು ಖಂಡಿಸಿ ಜಿಲ್ಲಾಧಿಕಾರಿ ಡಾ.ತ್ರಿಲೋಕಚಂದ್ರ ಅವರಿಗೆ ಮನವಿ ಪತ್ರ ನೀಡಿ ಪ್ರತಿಭಟನೆಯನ್ನು ನಿಲ್ಲಿಸಿದರು.
ಹಣದ ಪ್ರಲೋಭನೆ?
ಕಾಂಗ್ರೆಸ್'ನ ಆಕ್ರೋಶ ದಿನದ ಪ್ರತಿಭಟನೆಗೆ ಆಗಮಿಸಿದ ಜನರಿಗೆ ಹಳೆಯ ಐದು ನೂರು ಮುಖಬೆಲೆಯ ಗರಿಗರಿ ನೋಟುಗಳನ್ನು ವಿತರಣೆ ಮಾಡಿದ ಆರೋಪ ಕೇಳಿಬಂದಿದೆ. ಜನರಿಗೆ ನೋಟು ಹಂಚುತ್ತಿರುವ ದೃಶ್ಯಗಳು ಸುವರ್ಣನ್ಯೂಸ್'ನಲ್ಲಿ ಬಿತ್ತರಗೊಂಡಿವೆ. ಕಾಂಗ್ರೆಸ್ ಶಾಸಕರಾದ ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ರೂಪ ಶಶಿಧರ್ ಮೊದಲಾದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೋಲಾರದಲ್ಲಿ ಸಹಜ ಸ್ಥಿತಿ:
ಕಾಂಗ್ರೆಸ್ ಕರೆಕೊಟ್ಟಿದ್ದ ಆಕ್ರೋಶ ದಿನ್ ಪ್ರತಿಭಟನೆಯ ಕರೆಗೆ ಕೋಲಾರದಲ್ಲಿ ಹೆಚ್ಚೇನೂ ಪ್ರತಿಕ್ರಿಯೆ ಸಿಕ್ಕಿಲ್ಲ. ನಗರದಲ್ಲಿ ಎಂದಿನಂತೆ ಸಾರಿಗೆ ಬಸ್, ಖಾಸಗಿ ಬಸ್, ಆಟೋ ರಿಕ್ಷಾ ಸಂಚಾರ ನಡೆಯುತ್ತಿದೆ. ಹೊಟೇಲ್, ಅಂಗಡಿ-ಮುಗ್ಗಟ್ಟು, ಶಾಲಾ-ಕಾಲೇಜು, ಚಿಲ್ಲರೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ.
- ಡಿ.ಎನ್.ಲಕ್ಷ್ಮೀಪತಿ, ಸುವರ್ಣ ನ್ಯೂಸ್
