ನವದೆಹಲಿ [ಮೇ.12] : ಅಮೆರಿಕನ್ ಸಗಟು ದೈತ್ಯ ವಾಲ್ಮಾರ್ಟ್ ಕಂಪನಿಯು ಭಾರತದ ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟನ್ನು ಖರೀದಿಸಿರುವ ಬೆನ್ನಲ್ಲೇ, ವರ್ತಕರಿಂದ ಪ್ರತಿಭಟನೆ ಆರಂಭವಾಗಿದೆ. 

ದೆಹಲಿಯಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ದ ವರ್ತಕರು, ‘ವಾಲ್ಮಾರ್ಟ್ ಗೋ ಬ್ಯಾಕ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ವಾಲ್ಮಾರ್ಟ್ ಕಂಪನಿಯನ್ನು ಭಾರತಕ್ಕೆ ಪ್ರವೇಶಿಸಲು ಅನುವು ಮಾಡಿಕೊಟ್ಟರೆ ಸ್ಥಳೀಯ ವರ್ತಕರಿಗೆ ಅದು ಮಾರಕವಾಗಲಿದೆಯೆಂದು ವರ್ತಕರು ಆರೋಪಿಸಿದ್ದಾರೆ.

ವಾಲ್ಮಾರ್ಟ್ ಭಾರತಕ್ಕೆ ಪ್ರವೇಶಿಸುವುದನ್ನು ನಾವು ವಿರೋಧಿಸುತ್ತೇವೆ.  ಕೇಂದ್ರ ಸರ್ಕಾರವು ಈ ಬಗ್ಗೆ ತುರ್ತಾಗಿ ಕ್ರಮವನ್ನು ಕೈಗೊಳ್ಳಬೇಕು. ಜೊತೆಗೆ, ಕೇಂದ್ರೀಯ ಇ-ಕಾಮರ್ಸ್ ನೀತಿಯನ್ನು ರೂಪಿಸಬೇಕು, ಎಂದು ವರ್ತಕರು ಆಗ್ರಹಿಸಿದ್ದಾರೆ.

ವಾಲ್ಮಾರ್ಟ್ ಎಲ್ಲೆಲ್ಲಿ ಬೇರೂರಿದೆಯೋ, ಅಲ್ಲಲ್ಲಿ ಸ್ಥಳೀಯ ಉತ್ಪನ್ನ/ ವ್ಯಾಪಾರಗಳನ್ನು ನಾಶಮಾಡಿದೆ. ಸ್ಥಳೀಯ ಸಣ್ಣ ವರ್ತಕರು ವಾಲ್ಮಾರ್ಟ್‌ನಿಂದಾಗಿ ಭಾರೀ ನಷ್ಟಕ್ಕೊಳಗಾಗುತ್ತಾರೆ. ನಾವದನ್ನು ವಿರೋಧಿಸುತ್ತೇವೆ, ಎಂದು ಪ್ರತಿಭಟನಕಾರರು ಹೇಳಿದ್ದಾರೆ.

₹1 ಲಕ್ಷ ಕೋಟಿ ಮುಂಗಡ ಹಣ ಪಾವತಿಸುವ ಮೂಲಕ ಭಾರತೀಯ ಕಂಪನಿಯಾದ ಫ್ಲಿಪ್‌ಕಾರ್ಟ್‌ನ  ಶೇ.77 ಪಾಲನ್ನು ತಾನು ಖರೀದಿಸುವುದಾಗಿ  ಕಳೆದ ಬುಧವಾರ ವಾಲ್ಮಾರ್ಟ್ ಘೋಷಿಸಿದೆ.

ವಾಲ್ಮಾರ್ಟ್‌ನ ಈ ವ್ಯವಹಾರಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ [ಆರೆಸ್ಸೆಸ್] ಆರ್ಥಿಕ ವ್ಯವಹಾರಗಳ ವಿಭಾಗವಾದ  ಸ್ವದೇಶಿ ಜಾಗರಣ್ ಮಂಚ್ ಕೂಡಾ ವಿರೋಧ ವ್ಯಕ್ತಪಡಿಸಿದೆ.

ಭಾರತೀಯ ಕಮ್ಯೂನಿಸ್ಟ್ ಪಕ್ಷವು ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು. ಕೇಂದ್ರವು ಯಾವುದೇ ಕಾರಣಕ್ಕೂ ಜನವಿರೋಧಿ ವ್ಯವಹಾರಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿದೆ.