ಶ್ರೀರಾಮುಲುಗೆ  ಸಚಿವ ಸ್ಥಾನ ನೀಡದಿದ್ದಕ್ಕೆ ಪ್ರತಿಭಟನೆ, ಮೋದಿ ವಿರುದ್ಧ ಆಕ್ರೋಶ

ಮೈಸೂರು(ಸೆ.03): ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ನಾಯಕ ಸಮಾಜದ ಸಂಸದ ಬಿ. ಶ್ರೀರಾಮುಲುಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ರಾಜ್ಯದ ಜನಸಂಖ್ಯೆಯಲ್ಲಿ 5ನೇ ಸ್ಥಾನವನ್ನು ಹೊಂದಿರುವ ನಾಯಕ ಜನಾಂಗದ ಏಕೈಕ ಸಂಸದರಾದ ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡದಿರುವುದು ಮನುವಾದಿಗಳ ಕುತಂತ್ರವಾಗಿದೆ. ನಮ್ಮ ಸಮಾಜದ ಬಗ್ಗೆ ಕೇಂದ್ರವು ಹೊಂದಿರುವ ನಿರ್ಲಕ್ಷ್ಯ ಎತ್ತಿ ತೋರಿಸುತ್ತದೆ. ಇದೇ ರೀತಿ ಸಮಾಜ ವಿರೋಧಿ ನೀತಿ ಮನುವಾದಿಗಳು ಅನುಸರಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಕೀಲ ಪಡುವಾರಹಳ್ಳಿ ರಾಮಕೃಷ್ಣ ಎಚ್ಚರಿಕೆ ನೀಡಿದರು.

ಪದಾಧಿಕಾರಿಗಳಾದ ದ್ಯಾವಪ್ಪನಾಯಕ, ಪ್ರಭಾಕರ್, ಚಾಮಂಡಿಬೆಟ್ಟ ಶ್ರೀಧರ, ನಾಗವಾಲ ವಿನೋದ್, ಮಹೇಶ್ ಬೋಹಾದಿ, ರಾಜು ಮಾರ್ಕೆಟ್, ಜಿ.ಎಂ. ದಿವಾಕರ್, ಪುಷ್ಪಲತಾ, ಶರತ್, ಶ್ರೀನಿವಾಸ ಕಡಕೊಳ ಭಾಗವಹಿಸಿದ್ದರು.

(ಸಾಂದರ್ಭಿಕ ಚಿತ್ರ)