ಚೆನ್ನೈ(ಜೂ.01): ದೇಶಾದ್ಯಂತ ಶಾಲೆಗಳಲ್ಲಿ ತ್ರಿಭಾಷೆ ಶಿಕ್ಷಣ ವ್ಯವಸ್ಥೆಯ ಜಾರಿ ಕುರಿತಂತೆ, ಕೇಂದ್ರ ಸರ್ಕಾರದ ಪ್ರಸ್ತಾವ ವಿರೋಧಿಸಿ ತಮಿಳುನಾಡು ಸರ್ಕಾರ ಹಾಗೂ ವಿರೋಧ  ಪಕ್ಷಗಳು ಇಂದು ಪ್ರತಿಭಟನೆ ನಡೆಸಿವೆ.

ತಮಿಳುನಾಡು ದ್ವಿಭಾಷೆ ಶಿಕ್ಷಣ ವ್ಯವಸ್ಥೆಯನ್ನೇ ಮುಂದುವರೆಸಲಿದ್ದು, ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ. 

ಇಸ್ರೋ ಮಾಜಿ ಅಧ್ಯಕ್ಷ ಡಾ ಕಸ್ತೂರಿರಂಗನ್ ನೇತೃತ್ವದ ಸಮಿತಿ  ನವದೆಹಲಿಯಲ್ಲಿ ನಿನ್ನೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯ ಕರಡನ್ನು ಕೇಂದ್ರ ಮಾನವ  ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಸಲ್ಲಿಸಿದೆ.

ಪಠ್ಯಕ್ರಮದಲ್ಲಿ  ಭಾರತೀಯ ಜ್ಞಾನ ವ್ಯವಸ್ಥೆಯನ್ನು ಸೇರಿಸುವುದು, ರಾಷ್ಟ್ರೀಯ ಶಿಕ್ಷಣ ಆಯೋಗ ಸ್ಥಾಪನೆ,  ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕುವುದು ಮುಂತಾದ ಶಿಫಾರಸುಗಳನ್ನು ಈ ಕರಡು ಹೊಂದಿದೆ.

ಇದೇ ವೇಳೆ ತ್ರಿಭಾಷಾ ಸೂತ್ರ ಶಿಕ್ಷಣ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿರುವ ಡಿಎಂಕೆ ಸಂಸದ ತಿರುಚಿ ಶಿವ, ತಮಿಳುನಾಡಿನಲ್ಲಿ  ಹಿಂದಿ ಹೇರಿಕೆಯು ಬೆಂಕಿಯಲ್ಲಿ ಗೋದಾಮು ನಿರ್ಮಿಸಿದಂತೆ. ಈ ನಡೆಯ ವಿರುದ್ಧ ಡಿಎಂಕೆ ಹೋರಾಟ ಮುಂದುವರೆಸಲಿದೆ ಎಂದು ಹೇಳಿದ್ದಾರೆ.