ದೇಶಾದ್ಯಂತ ಮತ್ತೊಮ್ಮೆ ಬ್ಯಾಂಕ್ಗಳು ಸ್ತಬ್ಧವಾಗ್ತಿವೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ಸಾತ್ವಿಕ ಸಿಟ್ಟನ್ನು ಬ್ಯಾಂಕ್ ನೌಕರರ ಒಕ್ಕೂಟ ಮುಷ್ಕರದ ಮೂಲಕ ಹೊರಹಾಕ್ತಿದೆ. ಹೀಗಾಗಿ ಇಂದು ಮತ್ತೊಮ್ಮೆ ಬ್ಯಾಂಕ್ ವಹಿವಾಟು ಏರುಪೇರಾಗಲಿದೆ. ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ
ನವದೆಹಲಿ(ಆ.22): ಹೆಚ್ಚು ಕಡಿಮೆ ನಾಡಿನ ಜನ ಗೌರಿ-ಗಣೇಶ ಹಬ್ಬದ ತಯಾರಿಯಲ್ಲಿದ್ದಾರೆ.. ಹಬ್ಬವನ್ನ ಧೂಮ್-ದಾಮ್ ಅಂತ ಆಚರಿಸುವ ಪ್ಲಾನ್'ನಲ್ಲಿದ್ದವರಿಗೆ ಇಂದು ಬ್ಯಾಂಕ್ಗಳು ಶಾಕ್ ಕೊಟ್ಟಿವೆ. ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕ್'ಗಳು ಮತ್ತು ಹಳೆ ಖಾಸಗಿ ಬ್ಯಾಂಕ್ಗಳು ಬಂದ್ಗೆ ಕರೆಕೊಟ್ಟಿವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್'ನಲ್ಲೂ ಬೃಹತ್ ಜಾಥಾ ನಡೆಸಲು ತೀರ್ಮಾನಿಸಿದ್ದಾರೆ. ಯನೈಡೆಟ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ಸ್ ಅಡಿಯಲ್ಲಿ ಬರುವ 9 ಸಂಘಟನೆಯ 10 ಲಕ್ಷಕ್ಕೂ ಅಧಿಕ ನೌಕರರು ಮುಷ್ಕರದಲ್ಲಿ ಭಾಗಿಯಾಗ್ತಿದ್ದಾರೆ.
ಬ್ಯಾಂಕ್ ನೌಕರರಬೇಡಿಕೆಗಳೇನು..?
ಇನ್ನೂ ಬ್ಯಾಂಕ್ ನೌಕರರು ಬೀದಿಗಿಳಿದಿದ್ಯಾಕೆ? ಇವರ ಬೇಡಿಕೆಗಳೇನು ಎಂಬುವುದನ್ನ ನೋಡೋದಾದ್ರೆ, ರಾಷ್ಟ್ರಿಕೃತ ಬ್ಯಾಂಕ್ಗಳ ಖಾಸಗೀಕರಣ ಹಾಗೂ ವಿಲೀನವನ್ನು ಸರ್ಕಾರ ಕೈಬಿಡಬೇಕು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಎಫ್ ಆರ್ಡಿಐ ಬಿಲ್ ವಾಪಸ್ ಪಡೆಯಬೇಕು. ಪ್ರಸಿದ್ಧ ಖಾಸಗಿ ಕಂಪನಿಗಳು ಬ್ಯಾಂಕ್ಗಳಿಂದ ಪಡೆದಿರುವ ಸಾಲ ಮನ್ನಾ ಮಾಡಬಾರದು. ಗ್ರಾಹಕರ ಮೇಲೆ ಹೇರಿರುವ ಸೇವಾ ಶುಲ್ಕವನ್ನು ವಾಪಸ್ ಪಡೆಯಬೇಕು. ವಸೂಲಾಗದ ಸಾಲಗಳ ಮರು ಪಾವತಿಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಬ್ಯಾಂಕುಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳಿಗೆ ತಕ್ಷಣ ನೇಮಕಾತಿ ಮಾಡಬೇಕು ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಹೋರಾಟಕ್ಕಿಳಿಯುತ್ತಿದ್ದಾರೆ.
ಇನ್ನೂ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರದ ಕ್ರಮಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿಚಾರ ಮುಂದಿಟ್ಟುಕೊಂಡು ನೌಕರರ ಒಕ್ಕೂಟ ಮುಷ್ಕರ ನಡೆಸುತ್ತಿದೆ. ಆದ್ರೂ, ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ, ಎಚ್ ಡಿ ಎಫ್ ಸಿ, ಆ್ಯಕ್ಸಿಸ್, ಕೋಟಕ್ ಮಹೀಂದ್ರ ಬ್ಯಾಂಕ್‌ಗಳಲ್ಲಿ ಸಾಮಾನ್ಯ ಚೆಕ್ ವಹಿವಾಟಿನಲ್ಲಿ ವಿಳಂಬವನ್ನು ಹೊರತುಪಡಿಸಿದರೆ, ಗ್ರಾಹಕ ಸೇವೆಯಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.
